ಮಹಾರಾಷ್ಟ್ರ ಚುನಾವಣೆ : ಬಿಜೆಪಿ ನಾಯಕ ವಿನೋದ್‌ ತಾವ್ಡೆ ಮೇಲೆ ಹಣ ಹಂಚಿದ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ವಿರುದ್ಧ ಮತದಾರರಿಗೆ ಹಣ ಹಂಚಿದ ಆರೋಪ ಕೇಳಿಬಂದಿದೆ.

ಪಾಲ್ಗರ್ ಜಿಲ್ಲೆಯ ವಿಧಾನಸಭಾ ಕ್ಷೇತ್ರವೊಂದರ ಮತದಾರರಿಗೆ ತಾವ್ಡೆ ಹಣ ಹಂಚಿದ್ದಾರೆ ಎಂದು ಬಹುಜನ ವಿಕಾಸ್ ಆಘಾಡಿ ನಾಯಕ ಹಿತೇಂದ್ರ ಠಾಕೂರ್ ಮಂಗಳವಾರ ಹೇಳಿದ್ದಾರೆ.

ಬಿಜೆಪಿ ಈ ಆರೋಪವನ್ನು ತಳ್ಳಿ ಹಾಕಿದ್ದು, ಪ್ರಚಾರದ ತಂತ್ರವಲ್ಲದೇ ಮತ್ತೇನೂ ಅಲ್ಲ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಮಹಾ ವಿಕಾಸ್ ಆಘಾಡಿ ಈ ರೀತಿಯ ಆರೋಪ ಮಾಡುತ್ತಿದೆ ಎಂದು ತಾವ್ಡೆ ಹೇಳಿದ್ದಾರೆ.

ತಾವ್ಡೆ ಮತ್ತು ಬಹುಜನ ವಿಕಾಸ್ ಆಘಾಡಿ ನಾಯಕರು, ಕಾರ್ಯಕರ್ತರ ನಡುವಿನ ಆರೋಪ, ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್, ಮತದಾರರಿಗೆ 5 ಕೋಟಿ ಹಂಚಲು ವಿನೋದ್ ತಾವ್ಡೆ ಹೋಟೆಲ್ ಗೆ ಬರಲಿದ್ದಾರೆ ಎಂದು ಕೆಲ ಬಿಜೆಪಿ ನಾಯಕರು ಮಾಹಿತಿ ನೀಡಿದರು. ತಾವ್ಡೆಯಂತಹ ರಾಷ್ಟ್ರೀಯ ನಾಯಕರು ಈ ರೀತಿಯ ಕೆಲಸ ಮಾಡುತ್ತಾರೆ ಅಂದುಕೊಂಡಿರಲಿಲ್ಲ. ಆದರೆ ಅವರನ್ನು ಇಲ್ಲಿ ನೋಡಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಹಾಗೂ ಬಿಜೆಪಿಯನ್ನು ಒತ್ತಾಯಿಸುತ್ತೇನೆ ಎಂದರು.

ಬಿವಿಎ ಕಾರ್ಯಕರ್ತರು ವಿನೋದ್‌ ತಾವ್ಡೆ ಮೇಲೆ ಮುಗಿ ಬೀಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅವರಿಗೆ ರಕ್ಷಣೆ ಒದಗಿಸಿದ್ದಾರೆ. ತಾವ್ಡೆ ಸಭೆಯಲ್ಲಿ ಹಾಜರಿದ್ದವರಿಗೆ ಹಣ ಹಂಚುವುದನ್ನು ತಾವು ಕಣ್ಣಾರೆ ಕಂಡಿದ್ದೇವೆ ಎಂದು ಬಿವಿಎ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ತಾವ್ಡೆ ಅವರು ಸಭೆ ನಡೆಸುತ್ತಿದ್ದಾಗ ಹೊಟೇಲ್‌ನ ಮುಖ್ಯ ದ್ವಾರವನ್ನು ಮುಚ್ಚಲಾಗಿತ್ತು ಎಂದು ಬಿವಿಎ ಆರೋಪಿಸಿದೆ. ಇನ್ನು, ಇದೇ ವೇಳೆ ವಿನೋದ್‌ ತಾವ್ಡೆ ತಂಗಿದ್ದ ಹೋಟೆಲ್‌ನಲ್ಲಿ 9.93 ಲಕ್ಷ ರೂ. ಅನ್ನು ಜಪ್ತಿ ಮಾಡಿರುವುದಾಗಿ ಚುನಾವಣಾ ಆಯೋಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಬಹಿರಂಗ ಪ್ರಚಾರ ಅಂತ್ಯವಾದ ಬಳಿಕ ಸುದ್ದಿಗೋಷ್ಠಿ ನಡೆಸಿದ್ದಕ್ಕಾಗಿ ವಿನೋದ್‌ ತಾವ್ಡೆ ಮೇಲೆ ಎಫ್‌ಐಆರ್‌ ಅನ್ನು ಕೂಡ ಹಾಕಲಾಗಿದೆ.

ಮತ್ತೊಂದೆಡೆ ಈ ಆರೋಪವನ್ನು ತಳ್ಳಿಹಾಕಿದ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್, ಮಹಾ ವಿಕಾಸ್ ಆಘಾಡಿ ಚುನಾವಣೆಯಲ್ಲಿ ಈಗಾಗಲೇ ಸೋತಿದೆ. ಅವರು ಈ ಚುನಾವಣೆಯಲ್ಲಿ ಸೋಲಲಿದ್ದಾರೆ. ಅದಕ್ಕಾಗಿಯೇ ಅವರು ನಮ್ಮ ವಿರುದ್ಧ ಇಂತಹ ಅಸಂಬದ್ಧ ಆರೋಪಗಳನ್ನು ಮಾಡುತ್ತಿದ್ದಾರೆ, ಠಾಕೂರ್ ಮಾಡುತ್ತಿರುವುದು ಪ್ರಚಾರವಲ್ಲದೇ ಮತ್ತೇನಲ್ಲ ಎಂದು ಹೇಳಿದ್ದಾರೆ. ಈ ಮಧ್ಯೆ ಚುನಾವಣಾ ಆಯೋಗದ ನಿರ್ದೇಶನದಂತೆ ಪೊಲೀಸರು ವಿನೋದ್ ತಾವ್ಡೆ ವಿರುದ್ಧ ಎಫ್ ಐಆರ್ ದಾಖಲಿಸಿರುವುದಾಗಿ ತಿಳಿದುಬಂದಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!