ಹೊಸದಿಗಂತ ಡಿಜಿಟಲ್ ಡೆಸ್ಕ್:
2002 ರ ಗೋಧ್ರಾ ರೈಲು ದುರಂತ ಘಟನೆಯನ್ನು ಆಧರಿಸಿ ನಿರ್ಮಾಣವಾದ ‘ದಿ ಸಬರಮತಿ ರಿಪೋರ್ಟ್’ ಸಿನಿಮಾಗೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ನೀಡುವುದಾಗಿ ಮಧ್ಯಪ್ರದೇಶ ಸರ್ಕಾರ ಮಂಗಳವಾರ ಘೋಷಿಸಿದೆ.
ಮುಖ್ಯಮಂತ್ರಿ ಮೋಹನ್ ಯಾದವ್ ಈ ಕುರಿತು ಘೋಷಣೆ ಮಾಡಿದ್ದು, ಸಿನಿಮಾ ವೀಕ್ಷಿಸಲು ತಾನೂ ಹೋಗುವುದಾಗಿ ಹೇಳಿದ್ದಾರೆ.
ಧೀರಜ್ ಸರ್ನಾ ನಿರ್ದೇಶನದ ಈ ಚಿತ್ರವು ಗುಜರಾತ್‌ನಲ್ಲಿ ವ್ಯಾಪಕ ಕೋಮು ಗಲಭೆಗೆ ಕಾರಣವಾದ ಗೋಧ್ರಾ ರೈಲು ದುರಂತದ ಘಟನೆಗಳನ್ನು ಒಳಗೊಂಡಿದೆ.
“ದಿ ಸಬರಮತಿ ರಿಪೋರ್ಟ್’ ತುಂಬಾ ಒಳ್ಳೆಯ ಸಿನಿಮಾ. ನಾನೇ ಸಿನಿಮಾ ನೋಡಲು ಹೋಗುತ್ತೇನೆ. ನನ್ನ ಸಚಿವರು, ಶಾಸಕರು, ಸಂಸದರಿಗೂ ಈ ಸಿನಿಮಾ ನೋಡುವಂತೆ ಹೇಳಿದ್ದೆ. ರಾಜ್ಯದಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುತ್ತೇವೆ. ಜನರು ಇದನ್ನು ವೀಕ್ಷಿಸಬಹುದು ಎಂದು ಯಾದವ್ ಅವರು ತಿಳಿಸಿದ್ದಾರೆ.
ವೋಟ್ ಬ್ಯಾಂಕ್ ಉದ್ದೇಶಕ್ಕಾಗಿ ಗೋಧ್ರಾ ಘಟನೆಯ ಬಗ್ಗೆ ಪ್ರತಿಪಕ್ಷಗಳು ಕೊಳಕು ರಾಜಕೀಯದಲ್ಲಿ ತೊಡಗಿವೆ , ಆದ್ರೆ ಆ ಸಮಯದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರದ ಗೌರವವನ್ನು ಕಾಪಾಡಿದ್ದಾರೆ ಎಂದು ಶ್ಲಾಘಿಸಿದರು.
ಇನ್ನು ‘ದಿ ಸಬರಮತಿ ರಿಪೋರ್ಟ್’ ಸಿನಿಮಾವನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಸುಳ್ಳು ನಿರೂಪಣೆಯು ಸೀಮಿತ ಅವಧಿಯವರೆಗೆ ಮಾತ್ರ ಇರುತ್ತದೆ ಎಂದು ಹೇಳಿದ್ದಾರೆ.‘ಸಾಮಾನ್ಯ ಜನರು ನೋಡುವ ರೀತಿಯಲ್ಲಿ ಸತ್ಯ ಹೊರಗೆ ಬರುತ್ತಿರುವುದು ಒಳ್ಳೆಯ ವಿಷಯ. ಸುಳ್ಳಿನ ನಿರೂಪಣೆ ಕ್ಷಣಿಕ ಕಾಲಕ್ಕೆ ಮಾತ್ರ ಇರುತ್ತದೆ. ಕೊನೆಗೂ ಸತ್ಯ ಹೊರಗೆ ಬರುತ್ತದೆ’ ಎಂದು ಪೋಸ್ಟ್ ಮಾಡಿದ್ದಾರೆ.