Saturday, July 2, 2022

Latest Posts

ಮಹಾರಾಷ್ಟ್ರ ಎಂವಿಎ ಸರಕಾರದ ವಿರುದ್ಧ ಶಿಂಧೆ ನೇತೃತ್ವದ ಶಿವಸೇನಾ ಶಾಸಕರ ಬಂಡಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಮಹಾರಾಷ್ಟ್ರ ವಿಧಾನಪರಿಷತ್ತು ಚುನಾವಣೆ ಬಳಿಕ ಶಿವಸೇನೆ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿಕಟವರ್ತಿ ಹಾಗೂ ಶಿವಸೇನೆಯ ಪ್ರಮುಖ ನಾಯಕ ಎಂದು ಪರಿಗಣಿಸಲ್ಪಟ್ಟಿರುವ ಏಕನಾಥ್ ಶಿಂಧೆ ಅವರು 22ಕ್ಕೂ ಅಧಿಕ ಶಿವಸೇನಾ ಶಾಸಕರೊಂದಿಗೆ ಬಂಡಾಯ ಎದ್ದಿರುವ ಬಗ್ಗೆ ವರದಿಗಳು ತಿಳಿಸಿದ್ದು,ಇದು ಮಹಾ ವಿಕಾಸ ಅಘಾಡಿ (ಎಂವಿಎ)ಸರಕಾರದಲ್ಲಿ ತಲ್ಲಣ ಉಂಟು ಮಾಡಿದೆ. ಶಿವಸೇನೆಯಲ್ಲಿನ ಹಿಂದುತ್ವನಿಷ್ಠ ಶಾಸಕರು ಅದರಲ್ಲೂ ಗ್ರಾಮೀಣ ಪ್ರದೇಶದ ಅನೇಕ ಶಿವಸೇನಾ ನಾಯಕರು ಹಾಲಿ ಸರಕಾರದ ಬಗ್ಗೆ ತೀವ್ರ ಅಸಮಾಧಾನಗೊಂಡಿರುವುದಾಗಿ ವರದಿಗಳು ತಿಳಿಸಿವೆ.
ಮಹಾರಾಷ್ಟ್ರದಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲೂ ಬಿಜೆಪಿ ಹೆಚ್ಚುವರಿ ಸ್ಥಾನ ಗೆದ್ದಿದ್ದು, ಇದೀಗ ನಡೆದ ವಿಧಾನಪರಿಷತ್ ಚುನಾವಣೆಯಲ್ಲೂ ಬಿಜೆಪಿ ತಾನು ಸ್ಪರ್ಧಿಸಿದ್ದ ಎಲ್ಲ 5 ಸ್ಥಾನಗಳಲ್ಲೂ ಗೆಲುವು ಸಾಧಿಸಿ ಅಚ್ಚರಿ ನಿರ್ಮಿಸಿದೆ. ಆದರೆ 10 ಸ್ಥಾನಗಳ ಪೈಕಿ ಎಂವಿಎ 6ಸ್ಥಾನ ಪಡೆಯಬೇಕಾಗಿತ್ತಾದರೂ 5 ಸ್ಥಾನಗಳನ್ನು ಮಾತ್ರವೇ ಪಡೆಯಲು ಸಾಧ್ಯವಾಗಿದ್ದು, ಇದಕ್ಕೆ ಶಿವಸೇನೆ ಮತ್ತು ಕಾಂಗ್ರೆಸ್‌ನ ಕೆಲವು ಶಾಸಕರು ಬಿಜೆಪಿ ಅಭ್ಯರ್ಥಿ ಪರ ಮತದಾನ ಮಾಡುವ ಮೂಲಕ ಮಹಾವಿಕಾಸ ಅಘಾಡಿ ಸರಕಾರದ ವಿರುದ್ಧ ತಮ್ಮ ಅಸಂತೋಷವನ್ನು ವ್ಯಕ್ತಪಡಿಸಿರುವುದು ಕಾರಣ ಎನ್ನಲಾಗಿದೆ.
ಅನೇಕ ಸಮಯದಿಂದ ಶಿವಸೇನೆ ಮತ್ತು ಮಹಾ ವಿಕಾಸ ಅಘಾಡಿ ಮೈತ್ರಿಕೂಟದಲ್ಲಿ ನಡೆಯುತ್ತಿರುವ ತಿಕ್ಕಾಟ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಒಂದು ವರದಿ ಪ್ರಕಾರ, ಶಿಂಧೆ ಶಿವಸೇನೆಯ ಅತ್ಯಂತ ಪ್ರಭಾವಿ ನಾಯಕನಾಗಿದ್ದು,ಅವರ ನೇತೃತ್ವದಲ್ಲಿ 35ಕ್ಕೂ ಅಧಿಕ ಶಿವಸೇನಾ ಶಾಸಕರು ಬಂಡಾಯ ಎದ್ದಿರುವುದಾಗಿ ಹೇಳಲಾಗಿದೆ. ಈ ಪೈಕಿ 22ಕ್ಕೂ ಅಧಿಕ ಶಾಸಕರು ಸೂರತ್‌ನ ಹೊಟೇಲ್ ಒಂದರಲ್ಲಿ ತಂಗಿದ್ದಾರೆನ್ನಲಾಗಿದೆ.
ನಾವು ಬಾಳಾಸಾಹೇಬ್‌ನಿಷ್ಠರು:ಶಿಂಧೆ
ಈ ನಡುವೆ , ಏಕನಾಥ ಶಿಂಧೆ ಅವರು ಟ್ವೀಟ್ ಒಂದನ್ನು ಮಾಡಿದ್ದು, ತಾವು ಅಧಿಕಾರಕ್ಕಾಗಿ ಎಂದಿಗೂ ಮೋಸ ಮಾಡುವುದಿಲ್ಲ . ಬಾಳಾಸಾಹೇಬರು (ಭಾಳ್ ಠಾಕ್ರೆ)ನಮಗೆ ಹಿಂದುತ್ವವನ್ನು ಕಲಿಸಿದ್ದಾರೆ. ಬಾಳಾಸಾಹೇಬರ ಚಿಂತನೆಗಳು ಮತ್ತು ಧರ್ಮವೀರ್ ಆನಂದ್ ದಿಘೆ ಸಾಹೇಬ್ ಅವರ ಬೋಧನೆಗಳಿಂದ ಪ್ರೇರಿತರಾಗಿರುವ ನಾವು ಅಧಿಕಾರಕ್ಕಾಗಿ ಎಂದೂ ಮೋಸ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಶಿವಸೇನಾ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಏಕನಾಥ್ ಶಿಂಧೆ ಅವರ ಸ್ಥಾನಕ್ಕೆ ಶಿವಸೇನೆಯ ಸೆವ್ರಿ ಶಾಸಕ ಅಜಯ್ ಚೌಧರಿ ಅವರನ್ನು ನೇಮಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss