ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕ: ಶಾಸಕ ಪ್ರಿಯಾಂಕ್ ಖರ್ಗೆ

ಹೊಸದಿಗಂತ ವರದಿ, ಕಲಬುರಗಿ
ಮಹಾರಾಷ್ಟ್ರದಲ್ಲಿನ ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂವಿಧಾನವನ್ನು ಗಾಳಿಗೆ ತೂರಿ ಸದಸ್ಯರ ಖರೀದಿಸುವ ಪ್ರವೃತ್ತಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಟೀಕಿಸಿದರು.
ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ತಮ್ಮ ಪಕ್ಷ ಎಲ್ಲಿ ಅಧಿಕಾರದಲ್ಲಿ ಇಲ್ಲವೋ ಅಲ್ಲೆಲ್ಲ ಅಸಂವಿಧಾನಿಕ ದಾರಿಗಳ ಮೂಲಕ ಅಧಿಕಾರಕ್ಕೆ‌ ತರಲು ಪ್ರಯತ್ನ ನಡೆಯುತ್ತಿದೆ. ಯುಪಿ ಹೊರತುಪಡಿಸಿ ಗೋವಾ, ಮಧ್ಯಪ್ರದೇಶ, ಕರ್ನಾಟಕ, ಆಸ್ಸಾಮ್ ಹಾಗೂ ಮೇಘಾಲಯ ಸೇರಿದಂತೆ ಬಹುತೇಕ ಕಡೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಹಾಗಾಗಿ ತಮ್ಮ ಅಧಿಕಾರದ ಹಸಿವು ನೀಗಿಸಿಕೊಳ್ಳಲು ಬಿಜೆಪಿಯವರು ಅಸಂವಿಧಾನಿಕ ಕ್ರಮಕ್ಕೆ ಮುಂದಾಗಿದ್ದಾರೆ ಎಂದರು.
ಶಿವಸೇನೆಯ ಭಿನ್ನಮತೀಯರು ಗುಂಪಿನ ಹೇಳಿಕೆಯನ್ನು ಪ್ರಸ್ತಾಪಿಸಿದಾಗ ಉತ್ತರಿಸಿದ ಪ್ರಿಯಾಂಕ್ ಅವರು, ಶಿವಸೇನೆಯ ಸಿದ್ದಾಂತ ಏನೇ ಇರಲಿ ನಾವು ಹಾಗೂ ಅವರು ಜೊತೆಯಾಗಿ ಒಂದು ಒಳ್ಳೆಯ ಸರ್ಕಾರ ಕೊಡುವ ಉದ್ದೇಶ ಹೊಂದಿದ್ದೆವು. ಅದರಂತೆ ಎರಡು ವರ್ಷದಿಂದ ನಡೆಯುತ್ತಾ ಬಂದಿದೆ, ಅಭಿವೃದ್ಧಿ ವಿಚಾರದಲ್ಲಿ ತಕರಾರಿಲ್ಲ. ಆದರೆ ಆ ಪಕ್ಷದ ನಾಯಕರು ತಮ್ಮ ನಡುವಿನ ಜಗಳವನ್ನು ಬೇರೆಯವರ ಮೇಲೆ ಹಾಕುತ್ತಿದ್ದಾರೆ ಎಂದರು.
ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯಲ್ಲಿ ತಮ್ಮ ಕೈವಾಡ ಇಲ್ಲ ಎನ್ನುವ ಬಿಜೆಪಿಯ ಪ್ರತಿಪಾದನೆಗೆ ಉತ್ತರಿಸಿದ ಶಾಸಕ ಖರ್ಗೆ, ಸೂರತ್ ಹಾಗೂ ಆಸ್ಸಾಂ ನಲ್ಲಿ ಇವರ ಕುಮ್ಮಕ್ಕು ಇಲ್ಲದೇ ಅವರಿಗೆಲ್ಲ ಪೊಲೀಸ್ ಭದ್ರತೆ ಒದಗಿಸಲಾಗಿದೆಯಾ ? ಇಲ್ಲಿಯೂ ಕೂಡಾ 17 ಜನ ಶಾಸಕರು ಹೋದರಲ್ಲ ಆವಾಗಲೂ ಇವರ ಕುಮ್ಮಕ್ಕು ಇರಲಿಲ್ಲವೇ? ಜಾತ್ಯಾತೀತ ನಿಲುವಿನ ಶಾಸಕರು ಬಿಜೆಪಿಯ ಕುಮ್ಮಕ್ಕು ಇಲ್ಲದೇ ಏಕಾಏಕಿ ಬಿಜೆಪಿ ಸೇರುತ್ತಾರೆಯೇ? ಅದ್ಹೇಗೆ ತಾವು ನಂಬಿದ ಬುದ್ದ ಬಸವ ಅಂಬೇಡ್ಕರ್ ತತ್ವ ಸಿದ್ದಾಂತಗಳನ್ನು ಬಲಿಕೊಟ್ಟು ಆರ್ ಎಸ್ ಎಸ್ ಹಾಗೂ ಕೋಮುವಾದಿ ವಿಚಾರಗಳಿಗೆ ಬೆಂಬಲ ಕೊಡುತ್ತಾರೆ? ಇದಕ್ಕೆ ಅಧಿಕಾರದ ಆಸೆ ಹಾಗೂ ಹಣ ಆಮಿಷ ಕಾರಣವಾಗಿದೆ ಎಂದರು.
ಕಲ್ಯಾಣ ಕರ್ನಾಟಕದ ಕೆಲ‌ ಕಾಂಗ್ರೆಸ್ ನಾಯಕರು ಕೂಡಾ ಬಿಜೆಪಿ ಸೇರುವ ಸುದ್ದಿಗಳ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಖರ್ಗೆ, ಯಾರಾದರೂ ಹೋಗಲಿ. ಆದರೆ ಮೊದಲೇ ತಿರ್ಮಾನ ಮಾಡಲಿ. ಚುನಾವಣೆಯ ನಂತರ ಜನರ ಆಶೀರ್ವಾದ ಮಾರಿಕೊಂಡು ಪಕ್ಷ ಸೇರುವುದಕ್ಕಿಂತ ಮೊದಲೇ ಹೋಗಲಿ. ಕಾಂಗ್ರೆಸ್ ಪಕ್ಷ ಸ್ವತಂತ್ರ ಪೂರ್ವದಿಂದಲೂ ಹೋರಾಟ ನಡೆಸುತ್ತಲೇ ಬಂದಿದೆ ಮುಂದೆಯೂ ಹೋರಾಟ ನಡೆಸುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!