ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಥಿತಿ ತೀರಾ ಹದಗೆಟ್ಟಿದೆ. ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತು ಸರಣಿಯನ್ನು ಆತಿಥೇಯರಿಗೆ ಒಪ್ಪಿಸಿರುವ ಪಾಕ್ ಪಡೆ, ಈಗ ನಾನಾ ತರಹದ ಗೊಂದಲ ಮತ್ತು ಅನುಮಾನಗಳ ಸುಳಿಯಲ್ಲಿ ಸಿಲುಕಿದೆ. ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬರೋಬ್ಬರಿ 194 ರನ್‌ಗಳ ಅಂತರದಿಂದ ಮಂಡಿಯೂರಿದ ಬೆನ್ನಲ್ಲೇ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ರೊಚ್ಚಿಗೆದ್ದು ಬೃಹತ್ ಆಪರೇಷನ್ ಶುರು ಮಾಡಿದೆ.
ತಂಡದ ಕಳಪೆ ಪ್ರದರ್ಶನಕ್ಕೆ ಕೊಕ್ ನೀಡಲು ಮುಂದಾಗಿರುವ ಪಿಸಿಬಿ, ಮೂರನೇ ಪಂದ್ಯಕ್ಕೆ ಮುನ್ನವೇ ಬರೋಬ್ಬರಿ 7 ಆಟಗಾರರನ್ನು ತಂಡದಿಂದ ಹೊರಹಾಕಿ ತವರಿಗೆ ವಾಪಸ್ ಕಳುಹಿಸಿದೆ. ಮೊಹಮ್ಮದ್ ರಿಜ್ವಾನ್, ಸಲ್ಮಾನ್ ಅಲಿ ಅಘಾ, ಇಮಾಮ್-ಉಲ್-ಹಕ್, ಅಲಿ ಉಸ್ಮಾನ್, ಖುರ್ರಮ್ ಶಹಜಾದ್, ಆಮಿರ್ ಜಮಾಲ್ ಮತ್ತು ಮುಹಮ್ಮದ್ ಅವೈಸ್ ಜಾಫರ್ ಹೊರಬಿದ್ದ ಆಟಗಾರರು. ಇಷ್ಟೇ ಅಲ್ಲದೆ, ಮುಖ್ಯ ಕೋಚ್ ಸರ್ಫರಾಜ್ ಅಹ್ಮದ್ ಹಾಗೂ ಬೌಲಿಂಗ್ ಕೋಚ್ ಉಮರ್ ಗುಲ್ ಅವರನ್ನು ತಕ್ಷಣವೇ ಹುದ್ದೆಯಿಂದ ಕಿತ್ತುಹಾಕಲಾಗಿದೆ.
ಹೊರಬಿದ್ದ ಆಟಗಾರರ ಜಾಗಕ್ಕೆ 7 ಹೊಸ ಆಟಗಾರರನ್ನು ಇಂಗ್ಲೆಂಡ್‌ಗೆ ಕಳುಹಿಸಿಕೊಡಲಾಗಿದೆ. ಆದರೆ ಇಲ್ಲೊಂದು ದೊಡ್ಡ ಎಡವಟ್ಟಿದೆ. ಈ ಏಳು ಜನರಲ್ಲಿ ಕೇವಲ ಇಬ್ಬರಿಗೆ ಮಾತ್ರ ಅಂತಾರಾಷ್ಟ್ರೀಯ ಪಂದ್ಯಗಳ ಅನುಭವವಿದೆ, ಉಳಿದ ಐವರು ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆಯನ್ನೇ ಮಾಡದ ಆಟಗಾರರು. ಹೀಗಿರುವಾಗ ಇವರನ್ನಿಟ್ಟುಕೊಂಡು ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ಹೇಗೆ ಗೆಲ್ಲುತ್ತದೆ ಎಂಬುದು ಅಭಿಮಾನಿಗಳಿಗೆ ಅರ್ಥವಾಗುತ್ತಿಲ್ಲ.
ಇದಕ್ಕಿಂತಲೂ ದೊಡ್ಡ ವಿಷಯ ಅಂದರೆ, ತಂಡದ ಕೆಲ ಆಟಗಾರರ ಮೇಲೆ ‘ಮ್ಯಾಚ್ ಫಿಕ್ಸಿಂಗ್’ ಅನುಮಾನ ಮೂಡಿದೆ ಎನ್ನಲಾಗಿದೆ. ಪಾಕಿಸ್ತಾನ ಮಾಧ್ಯಮಗಳ ಪ್ರಕಾರ, ಪಿಸಿಬಿ ಮ್ಯಾನೇಜ್‌ಮೆಂಟ್ ಈಗಾಗಲೇ ಕೆಲವು ಆಟಗಾರರ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದೆ. ಇಡೀ ಸರಣಿ ಮುಗಿಯುವವರೆಗೆ ಈ ಫೋನ್‌ಗಳನ್ನು ವಾಪಸ್ ಕೊಡುವುದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದೆಯಂತೆ. ಯಾರ್ಯಾರ ಫೋನ್ ಜಪ್ತಿಯಾಗಿದೆ ಎಂಬುದು ಬಹಿರಂಗವಾಗಿಲ್ಲವಾದರೂ, ಮಂಡಳಿ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡದಿರುವುದು ಅನುಮಾನವನ್ನು ಇಮ್ಮಡಿಗೊಳಿಸಿದೆ.
ಸಾಮಾನ್ಯವಾಗಿ ಐಸಿಸಿ ನಿಯಮಗಳ ಪ್ರಕಾರ ಪಂದ್ಯ ನಡೆಯುವಾಗ ಡ್ರೆಸ್ಸಿಂಗ್ ರೂಮ್ ಹಾಗೂ ಮೈದಾನದಲ್ಲಿ ಮಾತ್ರ ಫೋನ್ ಬಳಸುವಂತಿಲ್ಲ. ಅಭ್ಯಾಸದ ವೇಳೆ ಹಾಗೂ ಪಂದ್ಯವಿಲ್ಲದ ದಿನಗಳಲ್ಲಿ ಆಟಗಾರರಿಗೆ ಮೊಬೈಲ್ ಬಳಸಲು ಪೂರ್ಣ ಸ್ವಾತಂತ್ರ್ಯವಿರುತ್ತದೆ. ಆದರೆ ಮೂರನೇ ಟೆಸ್ಟ್‌ಗೆ ಇನ್ನು ಸಮಯವಿರುವಾಗಲೇ ಪಿಸಿಬಿ ಹೀಗೆ ಫೋನ್‌ಗಳನ್ನು ಕಸಿದುಕೊಂಡಿರುವುದು ಪಾಕ್ ಕ್ರಿಕೆಟ್ ಅಂಗಳದಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದೆ.



