ಹೊಸದಿಗಂತ ಡಿಜಿಟಲ್ ಡೆಸ್ಕ್:
2027ರ ಐಪಿಎಲ್ ಮಿನಿ ಹರಾಜಿಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ, ಕೋಲ್ಕತ್ತಾ ನೈಟ್ ರೈಡರ್ಸ್ ಪಾಳಯದಿಂದ ಭಾರಿ ಸುದ್ದಿಯೊಂದು ಹೊರಬಿದ್ದಿದೆ. ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರ ಪತಿ ಹಾಗೂ ಕೆಕೆಆರ್ ತಂಡದ ಸಹ ಮಾಲೀಕರಾದ ಜಯ್ ಮೆಹ್ತಾ ತಮ್ಮ ಪಾಲಿನ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
ಕೆಕೆಆರ್ ತಂಡದಲ್ಲಿ ಶಾರುಖ್ ಖಾನ್ ಶೇ.55ರಷ್ಟು ಪಾಲು ಹೊಂದಿದ್ದರೆ, ಜಯ್ ಮೆಹ್ತಾ ಶೇ.45ರಷ್ಟು ಪಾಲು ಹೊಂದಿದ್ದಾರೆ. ಇದೀಗ ಜಯ್ ಮೆಹ್ತಾ ತಮ್ಮ ಪಾಲಿನ ಅರ್ಧದಷ್ಟು, ಅಂದರೆ ಶೇ.22.5ರಷ್ಟು ಷೇರುಗಳನ್ನು ಅಮೆರಿಕದ ‘ಏರೆಸ್ ಮ್ಯಾನೇಜ್‌ಮೆಂಟ್’ ಎಂಬ ಹೂಡಿಕೆ ಸಂಸ್ಥೆಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದಾರೆ. ಇಂಗ್ಲೆಂಡ್‌ನ ಚೆಲ್ಸಿಯಾ ಫುಟ್‌ಬಾಲ್ ಕ್ಲಬ್ ಹಾಗೂ ಅಮೆರಿಕದ ಮಿಯಾಮಿ ಡಾಲ್ಫಿನ್ಸ್ ಸೇರಿದಂತೆ ಹಲವು ಜಾಗತಿಕ ಕ್ರೀಡಾ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವ ಅನುಭವ ಈ ಸಂಸ್ಥೆಗಿದೆ.
ವರದಿಗಳ ಪ್ರಕಾರ, ಶೇ.22.5ರಷ್ಟು ಷೇರುಗಳನ್ನು ಸುಮಾರು 3,739 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈ ಒಪ್ಪಂದದ ಪ್ರಕಾರ ಕೆಕೆಆರ್ ತಂಡದ ಒಟ್ಟು ಮೌಲ್ಯ ಸುಮಾರು 16,634 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ವಿಶೇಷವೆಂದರೆ, ಈ ಸಂಪೂರ್ಣ ವ್ಯವಹಾರ ನಗದು ರೂಪದಲ್ಲೇ ನಡೆಯಲಿದ್ದು, ಒಪ್ಪಂದ ಅಂತಿಮಗೊಂಡರೆ ಜಯ್ ಮೆಹ್ತಾ ಅವರಿಗೆ ನೇರವಾಗಿ 3,739 ಕೋಟಿ ರೂಪಾಯಿ ನಗದು ಸಿಗಲಿದೆ.
2007ರಲ್ಲಿ ಶಾರುಖ್ ಖಾನ್, ಜೂಹಿ ಚಾವ್ಲಾ ಮತ್ತು ಜಯ್ ಮೆಹ್ತಾ ಸೇರಿ ‘ನೈಟ್ ರೈಡರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್’ ಕಂಪನಿಯಡಿ ಈ ತಂಡವನ್ನು ಖರೀದಿಸಿದ್ದರು. ಈಗ ನಡೆಯುತ್ತಿರುವ ಷೇರು ಮಾರಾಟದ ಒಪ್ಪಂದ ಪೂರ್ಣಗೊಳ್ಳಲು ಬಿಸಿಸಿಐ ಅನುಮತಿ ಕಡ್ಡಾಯವಾಗಿದೆ. ಹೊಸ ಹೂಡಿಕೆದಾರರ ಹಿನ್ನೆಲೆಯನ್ನು ಬಿಸಿಸಿಐ ಪರಿಶೀಲಿಸಿದ ಬಳಿಕವಷ್ಟೇ ಅಂತಿಮ ಒಪ್ಪಿಗೆ ಸಿಗಲಿದೆ. ಅಲ್ಲದೆ, ಒಪ್ಪಂದದ ಒಟ್ಟು ಮೌಲ್ಯದ ಶೇ.5ರಷ್ಟು ಹಣ ಬಿಸಿಸಿಐಗೆ ಪಾವತಿಯಾಗಲಿದ್ದು, ಇದರಿಂದ ಮಂಡಳಿಗೆ ಸುಮಾರು 200 ಕೋಟಿ ರೂಪಾಯಿ ಬಂಪರ್ ಆದಾಯ ಹರಿದು ಬರಲಿದೆ.



