ಮೇಕ್‌ ಇನ್‌ ಇಂಡಿಯಾ ಪರಿಣಾಮ: ಆಟಿಕೆಗಳ ಆಮದಿನಲ್ಲಿ ಶೇ.70 ಕುಸಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮೇಕ್‌ ಇನ್‌ ಇಂಡಿಯಾ ಉಪಕ್ರಮವು ಭಾರತದ ಆಟಿಕೆಗಳ ಉದ್ಯಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದು ಕಳೆದ ಮೂರು ವರ್ಷಗಳಲ್ಲಿ ಆಟಿಕೆಗಳ ಆಮದು ಶೇ.70ರಷ್ಟು ಕುಸಿತ ಕಂಡಿದ್ದು ರಪ್ತಿನ ಪ್ರಮಾಣದಲ್ಲಿ 61ಶೇಕಡಾದಷ್ಟು ಏರಿಕೆಯಾಗಿದೆ.

ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಭಾರತದ ಆಟಿಕೆಗಳ ಆಮದು ಮೌಲ್ಯವು 2018-19 ರ ಆರ್ಥಿಕ ವರ್ಷದಲ್ಲಿ 371 ಮಿಲಿಯನ್‌ ಡಾಲರ್‌ ಗಳಷ್ಟಿತ್ತು. ಆದರೀಗ ಇದರಲ್ಲಿ ಗಣನೀಯ ಇಳಿಕೆಯಾಗಿದ್ದು 2021-22 ರ ಆರ್ಥಿಕ ವರ್ಷದಲ್ಲಿ ಆಮದು ಮೌಲ್ಯವು 110 ಮಿಲಿಯನ್‌ ಡಾಲರ್‌ಗೆ ಇಳಿದಿದೆ. ಅಂದರೆ ಸರಿ ಸುಮಾರು 70.35 ಶೇಕಡಾದಷ್ಟು ಕುಸಿತವಾಗಿದೆ. ಇದರೊಟ್ಟಿಗೇ ರಫ್ತಿನ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದ್ದು ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಆಟಿಕೆಗಳ ರಫ್ತು ಶೇ.61.38ರಷ್ಟು ಜಿಗಿದಿದೆ. 2018-19ರಲ್ಲಿ 202 ಮಿಲಿಯನ್‌ ಡಾಲರ್‌ ಗಳಷ್ಟಿದ್ದ ರಫ್ತು 2021-22ನೇ ವರ್ಷದಲ್ಲಿ 326 ಮಿಲಿಯನ್‌ ಡಾಲರ್‌ ಗೆ ಏರಿಕೆಯಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅನಿಲ್ ಅಗರವಾಲ್ ಅವರು “ಭಾರತೀಯ ಆಟಿಕೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್‌ ಮಾಡಲು ಉತ್ತೇಜನ ನೀಡಲಾಗುತ್ತಿದೆ. ಅಲ್ಲದೇ ಭಾರತದ ಮಕ್ಕಳಿಗೆ ಸರಿಯಾದ ಆಟಿಕೆಗಳ ಲಭ್ಯತೆ, ಕಲಿಕೆಗೆ ಪೂರಕವಾಗಿ ಆಟಿಕೆಗಳ ಬಳಕೆ, ಭಾರತದ ಸಂಸ್ಕೃತಿ ಪರಂಪರೆಯ ಆಧಾರದಲ್ಲಿ ಆಟಿಕೆಗಳ ವಿನ್ಯಾಸದ ಜೊತೆಗೆ ದೇಶೀಯ ಆಟಿಕೆ ವಿನ್ಯಾಸವನ್ನು ಬಲಪಡಿಸುವ ಮೂಲಕ ಭಾರತವನ್ನು ಜಾಗತಿಕ ಆಟಿಕೆಗಳ ಉತ್ಪಾದನಾ ಕೇಂದ್ರವಾಗಿಸಲು ಗಮನ ಕೊಡಲಾಗುತ್ತಿದೆ” ಎಂದು ಹೇಳಿದ್ದಾರೆ.

ಇದಕ್ಕೆ ಪೂರಕವಾಗಿ ಭಾರತದಲ್ಲಿ ಆಟಿಕೆ ವಿನ್ಯಾಸಕಾರರಿಗೆ ಪ್ರೋತ್ಸಾಹ ನೀಡುವ, ಆಟಿಕೆ ಉದ್ಯಮಕ್ಕೆ ಉತ್ತೇಜನ ನೀಡಲು ಅಗತ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!