ಮಂಗಳೂರಿನಲ್ಲಿ ‘ಮಕ್ಕಳ ಹಬ್ಬ’: ಸಂಘನಿಕೇತನದ ಅಂಗಣದ ತುಂಬಾ ಕೇಳಿಸ್ತಿದೆ ಕನ್ನಡದ ಕಲರವ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬದುಕಿನ ಶಿಸ್ತಿನ ಪಾಠ ಕಲಿಸುವ ಮಂಗಳೂರಿನ ಸಂಘನಿಕೇತನದ ಅಂಗಣದ ತುಂಬೆಲ್ಲಾ ಈಗ ಕನ್ನಡ ಕಲರವ ! ಎರಡು ದಿನಗಳ ಕಾಲ ನಡೆಯಲಿರುವ ‘ಕನ್ನಡ ಶಾಲಾ ಮಕ್ಕಳ ಹಬ್ಬ’ ವಿದ್ಯಾರ್ಥಿಗಳ ಬೃಹತ್ ಸಮಾವೇಶಕ್ಕೆ ವಿದ್ಯಾರ್ಥಿ ಸಮೂಹವೇ ಹರಿದು ಬಂದಿದ್ದು, ಎಲ್ಲೆಡೆ ಹಬ್ಬದ ಸಂಭ್ರಮವಿದೆ. ಎಳೆ ಮನಸ್ಸುಗಳ ಚಿತ್ತಭಿತ್ತಿಯಲ್ಲಿ ಕನ್ನಡ ಪ್ರೇಮ ಗಟ್ಟಿಗೊಳಿಸುವ ಕೇಶವ ಸ್ಮೃತಿ ಸಂವರ್ಧನ ಸಮಿತಿಯ ದೂರದೃಷ್ಟಿಯ ಚಿಂತನೆಗೆ ಅರ್ಥ ಸಿಕ್ಕಿದೆ.

ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮೂಲೆ ಮೂಲೆಗಳಿಂದ ಆಗಮಿಸಿರುವ ಕನ್ನಡದ ಎಳೆ ಮನಸ್ಸುಗಳು ಹಬ್ಬದ ಹೆಸರಿನಲ್ಲಿ ನಡೆದ ಕನ್ನಡ ಕುರಿತ ಅರ್ಥಪೂರ್ಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ದಿನವಿಡೀ ನಡೆದ ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಂಡು ನಾಡು, ನುಡಿ, ಸಂಸ್ಕೃತಿಯ ಕುರಿತ ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸಗಳಿಗೆ ಕಿವಿಯಾಗಿದ್ದಾರೆ.
ಜಾಥಾದ ಮೆರುಗು

ಶನಿವಾರ ಸಭಾ ಕಾರ್ಯಕ್ರಮಕ್ಕೆ ಮುನ್ನ ನಗರದ ಗೋಕರ್ಣನಾಥೇಶ್ವರ ಕಾಲೇಜು ಬಳಿಯಿಂದ ಸಂಘನಿಕೇತನದವರೆಗೆ ನಡೆದ ಜಾಥಾಕ್ಕೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಚಾಲನೆ ನೀಡಿದರು. ಸಾಹಿತ್ಯ ಹೊತ್ತಿಗೆಯನ್ನು ಹೊತ್ತ ಪಲ್ಲಕಿಗೆ ಸ್ವತಃ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹೆಗಲು ನೀಡಿ ಕನ್ನಡ ಹಬ್ಬದ ಕಳೆ ಹೆಚ್ಚಿಸಿದರು. ಪಲ್ಲಕಿಯಲ್ಲಿ ಸಾಹಿತ್ಯ ಪುಸ್ತಕಗಳನ್ನು ಹೊತ್ತು ತರುವ ಮೂಲಕ ಕನ್ನಡದ ಕೆಲಸಕ್ಕೆ ಹೆಗಲು ಕೊಡಬೇಕಾದದ್ದು ಪ್ರತಿಯೊಬ್ಬರ ಜವಾಬ್ದಾರಿಯೆಂದು ಜಾಗೃತಿ ಮೂಡಿಸಲಾಯಿತು. ಚೆಂಡೆ, ವಾದ್ಯ, ವಿವಿಧ ಆಕರ್ಷಕ ಟ್ಯಾಬ್ಲೋಗಳು ಜಾಥಾಕ್ಕೆ ಇನ್ನಷ್ಟು ಮೆರುಗು ನೀಡಿದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!