October 1, 2026
Thursday, October 1, 2026
spot_img

ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಹೊಸದಿಗಂತ ವರದಿ, ಬೆಳಗಾವಿ:

ಜಮೀನು ಭೂ ಪರಿವರ್ತನೆ (ಎನ್ಎ) ಸಂಬಂಧ ಸಮಸ್ಯೆ ಹಿನ್ನೆಲೆ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ರುದ್ರಯ್ಯ ಅಮ್ಮಿನಬಾವಿಮಠ (50) ಎಂಬವರು ಎರಡು ಎಕರೆ ಜಮೀನನ್ನು ಎನ್ ಎ ಮಾಡಲು ಅರ್ಜಿ ಸಲ್ಲಿಸಿ ಹಲವು ದಿನಗಳಿಂದ ಕಚೇರಿಗಳಿಗೆ ಅಲೆದಾಡುತ್ತಿದ್ದರು. ಹಾವೇರಿ ಡಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರೂ, ಲ್ಯಾಂಡ್ ವಿದ್ ಚೇಂಜ್ ಆಗುವವರೆಗೂ ಎನ್ಎ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿಗೆ ಹಲವು ಬಾರಿ ಭೇಟಿ ನೀಡಿ ಮನವಿ ಮಾಡಿದ್ದ ರುದ್ರಯ್ಯ, ಗುರುವಾರ ಪ್ರಾದೇಶಿಕ ಆಯುಕ್ತ ಜಾನಕಿ ಅವರನ್ನು ಭೇಟಿ ಮಾಡಲು ಮತ್ತೊಮ್ಮೆ ಆಗಮಿಸಿದ್ದರು. ಆದರೆ ಆಯುಕ್ತ ಕಚೇರಿಯಲ್ಲಿ ಲಭ್ಯವಿಲ್ಲ ಎಂಬ ಮಾಹಿತಿ ತಿಳಿದ ಬಳಿಕ ಮನನೊಂದು ಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ತಕ್ಷಣವೇ ಅವರನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read