ಹೊಸದಿಗಂತ ವರದಿ ಚಿತ್ರದುರ್ಗ:
ದಿವಂಗತ ಡಿ. ಸುಧಾಕರ್ ಅವರು ಎಂದಿಗೂ ಜಾತಿ ಆಧಾರದ ಮೇಲೆ ರಾಜಕಾರಣ ಮಾಡಿದವರಲ್ಲ. ನೀತಿ, ಮಾನವೀಯತೆ ಹಾಗೂ ಸಿದ್ಧಾಂತಗಳನ್ನೇ ಉಸಿರಾಗಿಸಿಕೊಂಡು ಬದುಕಿದ ಸರಳ ಸಜ್ಜನೆಯ ಕೊಡುಗೈ ದಾನಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಮರಿಸಿದರು.
ಹಿರಿಯೂರು ಪಟ್ಟಣದ ನೆಹರು ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮಾಜಿ ಸಚಿವ ದಿವಂಗತ ಡಿ. ಸುಧಾಕರ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುಧಾಕರ್ ಕೇವಲ ಒಬ್ಬ ಸಚಿವನಾಗಿರಲಿಲ್ಲ. ನನಗೆ ಅತ್ಯಂತ ಆತ್ಮೀಯ ಸ್ನೇಹಿತ ಮತ್ತು ನನ್ನ ಕುಟುಂಬದ ಸದಸ್ಯರಲ್ಲಿ ಒಬ್ಬರಂತಿದ್ದರು. ಎಸ್.ಎಂ.ಕೃಷ್ಣ ಅವರಿಗೆ ಸುಧಾಕರ್ ಅವರನ್ನು ಪರಿಚಯಿಸಿ ರಾಜಕಾರಣಕ್ಕೆ ತಂದೆ. ರಂಗನಾಥ್ ಅವರ ಕ್ಷೇತ್ರದಲ್ಲಿ ಮತ್ತು ಚಳ್ಳಕೆರೆಯಲ್ಲಿ ಶಕ್ತಿ ತುಂಬುವ ಕೆಲಸ ಮಾಡಲಾಗಿತ್ತು. ಅವರ ಕುಟುಂಬ ಎಂದಿಗೂ ಸಮಾಜ ಸೇವೆಗೆ ಹೆಸರುವಾಸಿಯಾಗಿದೆ ಎಂದರು.
ಕುವೆಂಪು ಅವರು ಹೇಳಿದಂತೆ ಈ ಜಿಲ್ಲೆಯಲ್ಲಿ ಎಲ್ಲಾ ವರ್ಗದ ಜನರನ್ನೂ ಒಟ್ಟಿಗೆ ಕರೆದೊಯ್ದು ’ಸರ್ವಜನಾಂಗದ ಶಾಂತಿಯ ತೋಟ’ವನ್ನು ನಿರ್ಮಾಣ ಮಾಡಿದ ಕೀರ್ತಿ ಸುಧಾಕರ್ ಅವರಿಗೆ ಸಲ್ಲುತ್ತದೆ. ಸಣ್ಣ ಸಂಖ್ಯೆಯ ಜನಸಂಖ್ಯೆ ಹೊಂದಿದ್ದರೂ ತಮ್ಮ ನಿಷ್ಠಾವಂತ ಸೇವೆಯಿಂದ ಕ್ಷೇತ್ರದ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:
ಹಿರಿಯರು ಹೇಳುವಂತೆ ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ. ಸಂಪತ್ತು ಎಷ್ಟಿದ್ದರೂ ಕೊನೆಯಲ್ಲಿ ಉಳಿಯುವುದು ನಾವು ಗಳಿಸಿದ ಜನರ ಪ್ರೀತಿ ಮತ್ತು ಮಾಡಿದ ಸಾಧನೆ ಮಾತ್ರ. ಈ ನುಡಿನಮನ ಕಾರ್ಯಕ್ರಮದಲ್ಲಿ ನೆರೆದಿರುವ ಜನಸಾಗರವೇ ಅವರ ಸಾಧನೆಗೆ ಸಾಕ್ಷಿ ಎಂದು ಬಣ್ಣಿಸಿದರು.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಮಧ್ಯರಾತ್ರಿ ಸುರಿದ ಭಾರಿ ಮಳೆಯ ನಡುವೆಯೂ ಸುಧಾಕರ್ ಅವರು ವಹಿಸಿದ ಜವಾಬ್ದಾರಿ ಮತ್ತು ನೀಡಿದ ಸಹಕಾರ ಅನನ್ಯವಾದದ್ದು. ಅವರ ಈ ಕಾರ್ಯವನ್ನು ರಾಹುಲ್ ಗಾಂಧಿ ಅವರೂ ಸಹ ಸ್ಮರಿಸಿ, ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ ಎಂದು ನೆನಪಿಸಿಕೊಂಡರು.
ಬಸವಣ್ಣನವರು ಹೇಳಿದಂತೆ ಮಾನವನ ಹುಟ್ಟು ದೊಡ್ಡದಲ್ಲ, ಮಾನವೀಯತೆ ದೊಡ್ಡದು. ದಿ. ಡಿ. ಸುಧಾಕರ್ ಅವರು ಮಾನವೀಯ ಸಂದೇಶ ನೀಡಿ, ಕಾಂಗ್ರೆಸ್ ಪಕ್ಷ, ಸರ್ಕಾರ ಹಾಗೂ ಅವರ ಕುಟುಂಬವನ್ನು ಒಟ್ಟಾಗಿ ಮುನ್ನಡೆಸಿದ್ದರು. ಮನುಷ್ಯ ಎಷ್ಟೇ ಕೆಲಸ ಮಾಡಲಿ, ಆತನ ಶ್ರೇಷ್ಠ ಕಾರ್ಯಗಳು ಎಂದೆಂದಿಗೂ ಉಳಿಯುತ್ತವೆ. ಬಸವಣ್ಣನವರ ತತ್ತ್ವ ಸಿದ್ಧಾಂತದಂತೆ ಬಾಳಿದ ಸುಧಾಕರ್ ಅವರು ತಮ್ಮ ಸತ್ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ಎಂದಿಗೂ ಜೀವಂತವಾಗಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಮರಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಡಿ.ಕೆ. ಶಿವಕುಮಾರ್, ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ೫,೩೦೦ ಕೋಟಿ ಪ್ರಕಟಿಸಿದ್ದರು. ಆದರೆ, ಆ ಹಣವನ್ನು ನೀಡಲಿಲ್ಲ. ನುಡಿದಂತೆ ನಡೆಯದ ಬಿಜೆಪಿ ಮುಖಂಡರಿಗೆ ಜನರ ಮುಂದೆ ನಿಂತು ಮತ ಕೇಳುವ ನೈತಿಕ ಹಕ್ಕಿಲ್ಲ. ಆದರೆ ನಮ್ಮ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಜಿಲ್ಲೆಯ ನೀರಾವರಿ ಯೋಜನೆಗಳು ಹಾಗೂ ಜನರ ಬದುಕಿನ ಸುಧಾರಣೆಗೆ ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಭರವಸೆ ನೀಡಿದರು.
244 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ:
ಸುಧಾಕರ್ ಅವರಿಗೆ ಕ್ಷೇತ್ರದ ರೈತರ ಬದುಕು ಹಸಿರಾಗಬೇಕೆಂಬ ದೊಡ್ಡ ಕನಸಿತ್ತು. ತಾಲೂಕಿನ ೧೬ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮತಿ ನೀಡಬೇಕೆಂದು ಅವರು ನನ್ನ ಬಳಿ ಸದಾ ಮನವಿ ಮಾಡುತ್ತಿದ್ದರು. ಅವರ ಆಶಯದಂತೆ ಹಾಗೂ ನೀಡಿದ ಮಾತಿನಂತೆ, ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ೨೪೪ ಕೋಟಿ ವೆಚ್ಚದ ಈ ನೀರಾವರಿ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಚಿತ್ರದುರ್ಗ ಶಾಖಾ ಕಾಲುವೆಯ ೧೩೫ ಕಿ.ಮೀ. ವ್ಯಾಪ್ತಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಟ್ರಯಲ್ ರನ್ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಐಮಂಗಲ ವ್ಯಾಪ್ತಿಯ ಕೆರೆಗಳು ಹಾಗೂ ಅಕ್ವಾಡಕ್ಟ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ತಲುಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳು ಕೇವಲ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಕಾರ್ಯಕ್ರಮಗಳಲ್ಲ; ಬದಲಿಗೆ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರ ನೀಡಿದ ರಾಜ್ಯದ ಬಡ ಜನತೆಗೆ ತೀರಿಸುತ್ತಿರುವ ಋಣ ಎಂದರು. ಜೆಡಿಎಸ್ ಮತ್ತು ಬಿಜೆಪಿ ಆಡಳಿತಾವಧಿಯಲ್ಲಿ ಇಂತಹ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗಲಿಲ್ಲ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಸುಹಾಸ್ ಬೇಡಿಕೆಗಳಿಗೆ ಸ್ಪಂದನೆ:
ಡಿ.ಸುಧಾಕರ್ ಅವರ ಪುತ್ರ ಸುಹಾಸ್ ಅವರು ಕ್ಷೇತ್ರಕ್ಕೆ ಸಂಬಂಧಿಸಿದ ಸಾಲು ಸಾಲು ಬೇಡಿಕೆಗಳ ಪಟ್ಟಿಯನ್ನು ನನಗೆ ನೀಡಿದ್ದಾರೆ. ಇದು ಕೇವಲ ಸುಧಾಕರ್ ಅವರ ಕ್ಷೇತ್ರವಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಕ್ಷೇತ್ರ. ಸುಹಾಸ್ ಇಟ್ಟಿರುವ ಪ್ರತಿಯೊಂದು ನ್ಯಾಯಯುತ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ರಾಜಕಾರಣದಲ್ಲಿ ಆಸೆ ಇರುವುದು ತಪ್ಪಲ್ಲ. ಆದರೆ ಪಕ್ಷದ ಶಿಸ್ತು, ಪ್ರಾಮಾಣಿಕತೆ ಮತ್ತು ಜನಸೇವೆಯ ತತ್ವಗಳನ್ನು ಮರೆಯಬಾರದು. ಎಲ್ಲಿ ಶಿಸ್ತು ಮತ್ತು ಸೇವೆಯ ಮನೋಭಾವ ಇರುತ್ತದೆಯೋ ಅಲ್ಲಿ ಸೂಕ್ತ ಅವಕಾಶಗಳು ಅರಸಿ ಬರುತ್ತವೆ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚವ ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಪಿ.ಟಿ.ಪರಮೇಶ್ವರ್, ಟಿ.ಬಿ.ಜಯಚಂದ್ರ, ಹೆಚ್.ಆಂಜನೇಯ, ತನ್ವೀರ್ ಸೇಠ್, ಸಲಿಂ ಅಹಮದ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕರಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಮಾಜಿ ಶಾಸಕರಾದ ಪೂರ್ಣಿಮಾ, ಜಯಮ್ಮ ಬಾಲರಾಜ್, ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಡಿ.ಸುಧಾಕರ್ ಪತ್ನಿ ಅಶ್ವಿನಿ ಸುಧಾಕರ್, ಪುತ್ರ ಸುಹಾಸ್, ಪುತ್ರಿ ಸ್ಫೂರ್ತಿ ಮತ್ತಿತರರು ಹಾಜರಿದ್ದರು.



