ಹೊಸದಿಗಂತ ವರದಿ ಚಿತ್ರದುರ್ಗ:
ಹಿರಿಯೂರಿನ ನೆಹರೂ ಮೈದಾನದಲ್ಲಿ ಭಾನುವಾರ ನಡೆದ ದಿವಂಗತ ಡಿ.ಸುಧಾಕರ್ ನುಡಿನಮನ ಕಾರ್ಯಕ್ರಮದ ಸಂದರ್ಭದಲ್ಲಿ ಪೊಲೀಸರ ದುರ್ವರ್ತನೆ ಖಂಡಿಸಿ ಪ್ರತಕರ್ತರು ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.
ಚಿತ್ರದುರ್ಗ ನಗರದಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನ ಹಿರಿಯೂರಿನ ಕಾರ್ಯಕ್ರಮಕ್ಕೆ ವರದಿ ಮಾಡಲು ತೆರಳಿದ್ದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಅವರನ್ನು ಮಾತನಾಡಿಸಲು ಹುಳಿಯಾರು ರಸ್ತೆಯಲ್ಲಿನ ಹೆಲಿಪ್ಯಾಡ್‌ಗೆ ತೆರಳಲಾಯಿತು. ಹೆಲಿಪ್ಯಾಡ್ ಬಳಿ ವಾಹನ ನಿಲುಗಡೆಗೆ ಸಾಕಷ್ಟು ಜಾಗವಿದ್ದರೂ ಪೊಲೀಸರು ರಸ್ತೆಯಲ್ಲೇ ವಾರ್ತಾ ಇಲಾಖೆಯ ವಾಹನವನ್ನು ಅಡ್ಡಹಾಕಿದರು. ಎಲ್ಲ ಪತ್ರಕರ್ತರು ಅಲ್ಲಿಂದ ಹೆಲಿಪ್ಯಾಡ್‌ಗೆ ನಡೆದು ಹೋಗುವಂತೆ ಸೂಚಿಸಿದರು.
ಪೊಲೀಸರ ಕರ್ತವ್ಯಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಮರು ಮಾತನಾಡದ ಪತ್ರಕರ್ತರು ಎಲ್ಲರೂ ವಾಹನದಿಂದ ಇಳಿದು ಹೆಲಿಪ್ಯಾಡ್‌ವರಗೆ ಕಾಲ್ನಡಿಯಲ್ಲೇ ತೆರಳಿದರು. ಮುಖ್ಯಮಂತ್ರಿ ಆಗಮನದ ನಂತರ ವೇದಿಕೆ ಕಾರ್ಯಕ್ರಮದ ನೆಹರೂ ಮೈದಾನಕ್ಕೆ ತೆರಳಬೇಕಾಯಿತು. ಅಲ್ಲಿಗೆ ಹೋದ ಸಂದರ್ಭದಲ್ಲಿ ಮೂರ‍್ನಾಲ್ಕು ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಅಲ್ಲಿದ್ದ ಪೊಲೀಸರು ಪ್ರತಿ ಹಂತದಲ್ಲೂ ಪತ್ರಕರ್ತರನ್ನು ಒಳಗೆ ಬಿಡಲು ನಿರಾಕರಿಸಿದರು. ತಾವು ಪತ್ರಕರ್ತರೆಂದು ತಿಳಿಸಿದರೂ ಪೊಲೀಸರು ಮಾತ್ರ ತಮ್ಮ ಉದ್ದಟತನ ಮೆರೆಯುವುದನ್ನು ಮರೆಯಲಿಲ್ಲ.
ಬಿಳಿ ವಸ್ತ್ರಧಾರಿ ರಾಜಕೀಯ ಮುಖಂಡರನ್ನು ಸಲೀಸಾಗಿ ಬಿಡುತ್ತಿದ್ದ ಪೊಲೀಸರು ಪತ್ರಕರ್ತರ ಪ್ರವೇಶಕ್ಕೆ ಅಡ್ಡಿ ಮಾಡುತ್ತಿದ್ದರು. ಪತ್ರಕರ್ತರು ಎಂದು ತಿಳಿಸಿದರೂ ಒಳಗೆ ಬಿಡದೆ ಎದೆಗೆ ಕೈಹಾಕಿ ದೂಕುತ್ತಿದ್ದರು. ಪ್ರತಿ ಹಂತದಲ್ಲೂ ಗುರುತಿನ ಚೀಟಿಗಳನ್ನು ತೋರಿಸಿ ಮೈದಾನಕ್ಕೆ ಪ್ರವೇಶ ಪಡೆಯಬೇಕಾಯಿತು. ವೇದಿಕೆ ಕಾರ್ಯಕ್ರಮಕ್ಕೆ ಹೋಗುವ ಹಂತದಲ್ಲಿ ಪೊಲೀಸರು ಅಕ್ಷರಶಃ ಹಠಕ್ಕೆ ಬಿದ್ದವರಂತೆ ಪತ್ರಕರ್ತರನ್ನು ಅಡ್ಡಗಟ್ಟಿದರು. ನಿಮ್ಮನ್ನು ಒಳಗೆ ಬಿಡಲು ನಮಗೆ ಯಾವುದೇ ಸೂಚನೆ ಇಲ್ಲ ಎಂದು ಏಕವಚನದಲ್ಲಿ ಬಾಯಿಗೆ ಬಂದಂತೆ ಮಾತನಾಡಿದರು.
ಇದನ್ನೂ ಓದಿ:
ಕೈಗಳಲ್ಲಿ ಪ್ಯಾಡ್, ಪೆನ್ನು, ಕ್ಯಾಮರಾ, ಲೋಗೋ ಇರುವುದನ್ನು ಕಂಡರೆ ಇವರು ಪತ್ರಕರ್ತರು ಎನ್ನುವುದು ದನ ಕಾಯುವ ಹುಡುಗನಿಗೂ ತಿಳಿಯುತ್ತದೆ. ಇಷ್ಟೆಲ್ಲವನ್ನು ಕಣ್ಣಿಂದ ಕಂಡರೂ, ತಾವು ಪತ್ರಕರ್ತರು ಕಾರ್ಯಕ್ರಮದ ವರದಿ ಮಾಡಲು ಬಂದಿದ್ದೇವೆ ಎಂದು ತಿಳಿಸಿದರೂ ಪೊಲೀಸರು ವೇದಿಕೆ ಕಾರ್ಯಕ್ರಮಕ್ಕೆ ಹೋಗಲು ಪತ್ರಕರ್ತರಿಗೆ ಅಡ್ಡಿಪಡಿಸಿದರು. ಅಲ್ಲದೇ ಬಾಯಿಗೆ ಬಂದಂತೆ ಏಕವಚನದಲ್ಲಿ ಏರುಧ್ವನಿಯಲ್ಲಿ ಕೂಗಾಡಿದರು. ಇದರಿಂದ ಸಿಟ್ಟಿಗೆದ್ದ ಪತ್ರಕರ್ತರು ಕಾರ್ಯಕ್ರಮದ ಪೆಂಡಾಲ್ ಪಕ್ಕದಲ್ಲಿ ಧರಣಿ ನಡೆಸಿದರು.
ಪೊಲೀಸರ ದಾದಾಗಿರಿಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಆದರೆ ಕೆಲವು ಪೊಲೀಸ್ ಅಧಿಕಾರಿಗಳು ಬಂದು ಪತ್ರಕರ್ತರನ್ನು ಮನವೊಲಿಸುವ ಪ್ರಯತ್ನ ಮಾಡಿದರೂ ಅದು ಫಲ ನೀಡಲಿಲ್ಲ. ಪೊಲೀಸರಿಗೆ ಸರಿಯಾದ ಸೂಚನೆ ನೀಡಿ ಪತ್ರಕರ್ತರ ಪ್ರವೇಶಕ್ಕೆ ಅವಕಾಶ ಮಾಡಬೇಕಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಮಗೇನೂ ತಿಳಿದಿಲ್ಲ ಎಂಬಂತೆ ಸುಮ್ಮನೆ ನಿಂತು ನೋಡುತ್ತಿದ್ದರು. ಒಂದು ಹಂತದಲ್ಲಿ ಅವರೂ ಸಹ ಪತ್ರಕರ್ತರ ಮನವೊಲಿಸುವ ಪ್ರಯತ್ನ ಮಾಡಿದರೂ ಪತ್ರಕರ್ತರು ಮಣಿಯಲಿಲ್ಲ.
ವಿಷಯ ತಿಳಿದ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಪ್ರಭಾಕರ್, ಚಳ್ಳಕೆರೆ ಶಾಸಕ ಟಿ.ರಘೂಮೂರ್ತಿ ಸ್ಥಳಕ್ಕೆ ಆಗಮಿಸಿ ಪತ್ರಕರ್ತರ ಮನವೊಲಿಸಿ ಕಾರ್ಯಕ್ರಮಕ್ಕೆ ಕರೆದೊಯ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದವರಿಗೆ ಇಂತಹ ಸಂದರ್ಭದಲ್ಲಿ ಯಾರ‍್ಯಾರಿಗೆ ಪ್ರವೇಶ ನೀಡಬೇಕು. ಏನು ವ್ಯವಸ್ಥೆ ಮಾಡಬೇಕೆಂಬ ಕನಿಷ್ಠ ಜ್ಞಾನ ಇರಬೇಕು. ಮುಖ್ಯಮಂತ್ರಿ ಬರ ಅಧ್ಯಯನ, ಪ್ರಗತಿ ಪರಿಶೀಲನಾ ಸಭೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಪತ್ರಕರ್ತರಿಗೆ ಕಿರಿಕಿರಿ ಮಾಡುವುದೇ ಆಯಿತು ಎಂದು ಪತ್ರಕರ್ತರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು.



