ಹೊಸದಿಗಂತ ವರದಿ ನಾಪೋಕ್ಲು:
ಆನೆಯೊಂದು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರ ಕಾಲು ಮುರಿತಕ್ಕೊಳಗಾದ ಘಟನೆ ನಾಪೋಕ್ಲು ಸಮೀಪದ ಕಕ್ಕಬ್ಬೆ ಗ್ರಾಮದ ಪಾಡಿ ಇಗ್ಗುತ್ತಪ್ಪ ದೇವಾಲಯದ ಬಳಿ ಬುಧವಾರ ಸಂಜೆ ನಡೆದಿದೆ.
ಕಕ್ಕಬೆಯ ಕಂಬೆಯಂಡ ಅನು ಸುಬ್ಬಯ್ಯ (50) ಎಂಬವರು ಸಂಜೆ ಸುಮಾರು ಆರು ಗಂಟೆ ಸಮಯದಲ್ಲಿ ತಮ್ಮ ಮನೆಗೆ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ಕಾಡಾನೆ ದಾಳಿ ನಡೆಸಿದ್ದು, ದಿಢೀರ್ ದಾಳಿಯಿಂದ ಸುಬ್ಬಯ್ಯ ಅವರ ಕಾಲು ಮುರಿದಿದೆ.
ವಿಷಯ ತಿಳಿದ ಗ್ರಾಮ ಪಂಚಾಯತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ಮತ್ತು ಬಾಚಮಂಡ ಲವ ಚಿಣ್ಣಪ್ಪ ಅವರು ಸುಬ್ಬಯ್ಯ ಅವರನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಈ ಭಾಗದಲ್ಲಿ ಆಗಾಗ ಕಾಡಾನೆ ದಾಳಿ ನಡೆಸುತ್ತಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಯ ಬಗ್ಗೆ ವೀರಾಜಪೇಟೆ ಶಾಸಕ ಕೆ.ಎನ್ ಪೊನ್ನಣ್ಣರಿಗೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ತಿಳಿಸಿದ್ದಾರೆ.