ಹಾಡ ಹಗಲೇ ಕಾರಿನ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ: ವ್ಯಕ್ತಿ ಬರ್ಬರ ಹತ್ಯೆ

ದಿಗಂತ ವರದಿ ವಿಜಯಪುರ:

ಹಾಡ ಹಗಲೇ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ ಗ್ರಾಮದ ಮನಾವರ ದೊಡ್ಡಿ ಬಳಿ ಮಂಗಳವಾರ ನಡೆದಿದೆ.

ಗುಂಡು ತಗಲಿ ಸತೀಶ ರಾಠೋಡ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ರಮೇಶ ಚವ್ಹಾಣ ಹಾಗೂ ಇತರರಿಂದ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದ್ದು, ಸ್ಥಳದಲ್ಲಿ ಸತೀಶನ ಮೇಲೆ ದಾಳಿ ಮಾಡಿದ ಒಬ್ಬ ಹಲ್ಲೆಕೋರನ ಕಿವಿ ಕೂಡ ತುಂಡಾಗಿ ಬಿದ್ದಿರುವುದು ಪತ್ತೆಯಾಗಿದೆ.

ಯುವತಿಯ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ಈ ಕೃತ್ಯ ನಡೆದಿದೆ ಎಂದು ಕೊಲೆಗೀಡಾದ ಸತೀಶನ ತಂದೆ
ಪ್ರೇಮಸಿಂಗ್ ಆರೋಪ ಮಾಡಿದ್ದಾನೆ.

ರಮೇಶ ಚವ್ಹಾನ ಪುತ್ರಿಯನ್ನು ಸತೀಶನು ಮದುವೆಯಾಗಲು ಗುರು ಹಿರಿಯರ ಸಮ್ಮುಖದಲ್ಲಿ ಕೇಳಲಾಗಿತ್ತು.
ಕಳೆದ ಒಂದೂವರೆ ವರ್ಷದ ಹಿಂದೆ ರಮೇಶ ಮಗಳ ಜೊತೆ ಸತೀಶ ವಿವಾಹ ಪ್ರಸ್ತಾಪ ನಡೆದಿತ್ತು.
ಆಗ ಸತೀಶಗೆ ನನ್ನ ಮಗಳನ್ನು ಕೊಡಲ್ಲ ಎಂದು ಯುವತಿಯ ತಂದೆ ರಮೇಶ ಹೇಳಿದ್ದನಂತೆ.

ಇದಾದ ಬಳಿಕ ಒಂದು ವರ್ಷದ ಹಿಂದೆ ರಮೇಶನ ಮಗಳು ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಳಂತೆ. ಇದಕ್ಕೆ ಸತೀಶನೆ ಕಾರಣ ಎಂಬ ಸಿಟ್ಟು ರಮೇಶ ಹಾಗೂ ಸಹಚರಿಗೆ ಇತ್ತು ಎನ್ನಲಾಗಿದೆ.

ಇದೇ ಸಿಟ್ಟಿನಲ್ಲಿ ಸತೀಶನನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆಂದು ಸತೀಶ ತಂದೆ ಪ್ರೇಮ್ ಸಿಂಗ್ ಆರೋಪಿಸಿದ್ದು, ಪೊಲೀಸರ ತನಿಖೆ ಬಳಿಕ ಇದರ ಸತ್ಯಾಸತ್ಯತೆ ಹೊರ ಬರಬೇಕಿದೆ.

ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಇತರೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಸತೀಶ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!