ಹೊಸದಿಗಂತ ಡಿಜಿಟಲ್ ಡೆಸ್ಕ್ :
ನೆರೆಮನೆಯವನಿಂದ ತನ್ನ ತಾಯಿಯನ್ನು ರಕ್ಷಿಸಲು ಮುಂದಾದ 17 ವರ್ಷದ ಬಾಲಕನನ್ನು ಇರಿದು, ತಾಯಿಯ ಮೇಲೆ ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ನಗರದ ಸಮೀಪವಿರುವ ಗ್ರಾಮದಲ್ಲಿ ನಡೆದಿದೆ.
ಆರೋಪಿ ಕರಾವಳಿ ಗ್ರಾಮದ ನಿವಾಸಿಯಾಗಿದ್ದು, ಘಟನೆಯ ಬಳಿಕ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಮಹಿಳೆ ಮತ್ತು ನೆರೆ ಮನೆಯ ಪುರುಷನ ನಡುವೆ ಜಗಳ ನಡೆದಿದ್ದು, ಆತನ ಅಶ್ಲೀಲ ಮಾತುಗಳಿಂದ ಜಗಳ ಮುಂದುವರಿದಿದೆ. ಈ ವೇಳೆ ಆಕೆಯ ಮೇಲೆ ಹಲ್ಲೆ ಮಾಡುತ್ತಿರುವುದನ್ನು ಕಂಡು ಮಗ ತಡೆಯಲು ಮುಂದಾಗಿದ್ದಾನೆ. ಆತ ಬಾಲಕನನ್ನು ಚಾಕುವಿನಿಂದ ಇರಿದಿದ್ದಾನೆ.
ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಮತ್ತು ಲೈಂಗಿಕ ಕಿರುಕುಳದ ಜೊತೆಗೆ ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಿಸುವ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.