ಮತಾಂತರಕ್ಕೆ ಒಪ್ಪದ ಗೆಳತಿಯನ್ನು ತಳ್ಳಿಕೊಂದಿದ್ದ ಮೊಹಮ್ಮದ್ ಮೇಲೆ ಎನ್‌ಕೌಂಟರ್‌ ನಡೆಸಿದ ಯುಪಿ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮತಾಂತರವಾಗಲು ಒಪ್ಪದ ತನ್ನ 17 ವರ್ಷದ ಹಿಂದೂ ಗೆಳತಿಯೊಂದಿಗೆ ಜಗಳವಾಡಿ ಅಪಾರ್ಟ್‌ಮೆಂಟ್ ಕಟ್ಟಡದ ನಾಲ್ಕನೇ ಮಹಡಿಯಿಂದ ತಳ್ಳಿದ್ದ ಮೊಹಮ್ಮದ್ ಸುಫಿಯಾನ್ ಎಂಬಾತನ ಮೇಲೆ ಯುಪಿ ಪೊಲೀಸರು ಶುಕ್ರವಾರ ಎನ್‌ ಕೌಂಟರ್‌ ನಡೆಸಿ ಸೆರೆಹಿಡಿದಿದ್ದಾರೆ.
ಉತ್ತರ ಪ್ರದೇಶದ ಲಕ್ನೋದ ಮೊಹಮ್ಮದ್ ಸುಫಿಯಾನ್ ಎಂಬಾತ ನಿಧಿ ಗುಪ್ತಾ ಎಂಬ ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿಕೊಂಡಿದ್ದ. 17 ವರ್ಷದ ಯುವತಿಗೆ ಮೊಬೈಲ್ ಫೋನ್ ಕೂಡ ಉಡುಗೊರೆಯಾಗಿ ನೀಡಿದ್ದ. ತನ್ನನ್ನು ಮದುವೆಯಾಗಲು ಮತಾಂತರಗೊಳ್ಳುವಂತೆ ಆಕೆಯ ಮೇಲೆ ಸತತವಾಗಿ ಒತ್ತಡ ಹೇರುತ್ತಿದ್ದ ಎಂದು ಹೇಳಲಾಗಿದೆ.
ಮಂಗಳವಾರ ಹುಡುಗಿಯ ಮನೆಯವರು ಸುಫಿಯಾನ್ ಮನೆಗೆ ಭೇಟಿ ನೀಡಿದಾಗ ನಿಧಿ ಅಲ್ಲಿರುವುದನ್ನು  ಕಂಡು ಅವರಿಬ್ಬರ ಸಂಬಂಧದ ಬಗ್ಗೆ ತಿಳಿದುಕೊಂಡಿದ್ದರು. ಈ ವೇಳೆ ಸೂಫಿಯಾನ್‌ ಮತ್ತು ಯುವತಿ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಹುಡುಗಿ ಈ ವೇಳೆ ಮನೆಯ ನಾಲ್ಕನೇ ಮಹಡಿಗೆ ಓಡಿಹೋಗಿದ್ದಳು. ಈ ವೇಳೆ ಸೂಫಿಯಾನ್ ಅವಳನ್ನು ಹಿಂಬಾಲಿಸಿದ್ದ. ಸ್ವಲ್ಪ ಸಮಯದ ನಂತರ, ಕುಟುಂಬ ಸದಸ್ಯರಿಗೆ ಕಿರುಚಾಟದ ಜೊತೆಗೆ ಹುಡುಗಿ ಬಿದ್ದ ಸದ್ದು  ಕೇಳಿದೆ. ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ನಂತರ ಆಕೆ ಸಾವನ್ನಪ್ಪಿದ್ದಾಳೆ. ಬಾಲಕಿ ಮೃತಪಟ್ಟ ಸುದ್ದಿ ತಿಳಿದ ಸುಫಿಯಾನ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಬಗ್ಗೆ ತನಿಖೆಗಿಳಿದ ಪೊಲೀಸರು ಒಂಬತ್ತು ಮಂದಿಯ ವಿಶೇಷ ತಂಡವನ್ನು ರಚಿಸಿದ್ದರು ಮತ್ತು ಸುಫಿಯಾನ್ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂಪಾಯಿ ನಗದು ಬಹುಮಾನ ಘೋಷಿಸಿದ್ದರು. ಬಾಲಕಿಯ ಸಾವಿನ ನಂತರ ತಲೆಮರೆಸಿಕೊಂಡಿದ್ದ ಸುಫಿಯಾನ್ ಎನ್‌ಕೌಂಟರ್ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಿದ್ದು, ಸದ್ಯ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸೂಫಿಯಾನ್‌ ಮೇಲೆ ಕೊಲೆ ಆರೋಪದ ಜೊತೆಗೆ ಸುಫಿಯಾನ್ ವಿರುದ್ಧ ‘ಕಾನೂನುಬಾಹಿರ ಧಾರ್ಮಿಕ ಮತಾಂತರ’ ಪ್ರಕರಣವನ್ನೂ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!