ಮನರೇಗಾ ಕಾರ್ಯಕ್ರಮ ‘ಪರಿಷ್ಕೃತ ಅಂದಾಜು ಪಟ್ಟಿ’ ಸಲ್ಲಿಸಲು ಸಂಸದ ಪ್ರತಾಪ್ ಸಿಂಹ ಸೂಚನೆ

ಹೊಸ ದಿಗಂತ ವರದಿ, ಮಡಿಕೇರಿ:

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕೇಂದ್ರಗಳನ್ನು ಆರಂಭಿಸಿ ‘ಗ್ರಾಮ ಒನ್’ ಸೇವೆಗಳನ್ನು ತಲುಪಿಸಲು ಶ್ರಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಂ.ಪಿ.ಅಪ್ಪಚ್ಚರಂಜನ್ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿ.ಪಂ.ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದರು ಹಾಗೂ ಶಾಸಕರು ಮಾತನಾಡಿದರು.
ಸರ್ಕಾರ ಗ್ರಾ.ಪಂ.ಮಟ್ಟದಲ್ಲಿ ಗ್ರಾಮ ಒನ್ ಸೇವೆ ಸ್ಥಾಪಿಸಿದ್ದು, ಆ ನಿಟ್ಟಿನಲ್ಲಿ ಗ್ರಾ.ಪಂ.ಗಳಲ್ಲಿ ಗ್ರಾಮ ಒನ್ ಕೇಂದ್ರಗಳು ಕಡ್ಡಾಯವಾಗಿ ಇರಬೇಕು. ಗ್ರಾಮೀಣರಿಗೆ ಸರ್ಕಾರದ ಹಲವು ಸೇವೆಗಳನ್ನು ತಲುಪಿಸಬೇಕು ಎಂದು ಪ್ರತಾಪ್ ಸಿಂಹ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಜಿಲ್ಲೆಯ ಎಲ್ಲಾ ಗ್ರಾ.ಪಂ.ಗಳಲ್ಲಿ ‘ಗ್ರಾಮಒನ್’ ಅನುಷ್ಠಾನಗೊಳಿಸಬೇಕು. ಗ್ರಾ.ಪಂ.ಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಗ್ರಾ.ಪಂ.ನಲ್ಲಿ ಪ್ರತ್ಯೇಕವಾಗಿ ಗ್ರಾಮ ಒನ್ ಕೇಂದ್ರ ತೆರೆದು ಸೇವೆಗಳನ್ನು ತಲುಪಿಸಲು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು, ಬಾಪೂಜಿ ಸೇವಾ ಕೇಂದ್ರಗಳು ಇದ್ದು, ಹೋಬಳಿ ಕೇಂದ್ರಗಳಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರ ಸಹ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು, ಪ್ರತೀ ಗ್ರಾ.ಪಂ.ಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳಿದ್ದು, ಅದರಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಮ ಒನ್ ಸೇವೆ ಕಲ್ಪಿಸಲಾಗುವುದು ಎಂದು ಹೇಳಿದರು.
ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಚರಂಡಿ, ಸಿಸಿ ರಸ್ತೆ, ಕೆರೆ ಅಭಿವೃದ್ಧಿ, ಕಸ ವಿಲೇವಾರಿ ಘಟಕ ನಿರ್ಮಾಣ, ಕೃಷಿ ಹೊಂಡ ಹೀಗೆ ಇದುವರೆಗೆ ಕೈಗೊಳ್ಳಲಾದ ಹಲವು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಈ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ‘ಪರಿಷ್ಕೃತ ಕ್ರಿಯಾ ಯೋಜನೆ’ಯ ಅಂದಾಜು ಪಟ್ಟಿ ಸಲ್ಲಿಸುವಂತೆ ತಾ.ಪಂ.ಇಒಗಳಿಗೆ ನಿರ್ದೇಶನ ನೀಡಿದರು.
ಈ ಹಿಂದೆ ಪ್ರತೀ ಗ್ರಾ.ಪಂ.ಗೆ 30 ಲಕ್ಷ ರೂ. ನೀಡಲಾಗುತ್ತಿತ್ತು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 18 ಲಕ್ಷ ರೂ. ಇನ್ನೂ ಹೆಚ್ಚುವರಿಯಾಗಿ ನೀಡುತ್ತಿದ್ದು, ಇದನ್ನು ಬಳಸಿಕೊಂಡು ಗ್ರಾ.ಪಂ.ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಪ್ರತಾಪ್ ಸಿಂಹ ಅವರು ಹೇಳಿದರು. ತಾ.ಪಂ.ಇಒಗಳು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಪರಿಷ್ಕೃತ ಕ್ರಿಯಾ ಯೋಜನೆಗೆ ಪ್ರಸ್ತಾಪವನ್ನು ಒಂದು ವಾರದಲ್ಲಿ ನೀಡುವಂತೆ ಸಂಸದರು ಸೂಚಿಸಿದರು.
ತಾ.ಪಂ.ಇಒಗಳಾದ ಶೇಖರ್ (ಮಡಿಕೇರಿ), ಜಯಣ್ಣ (ಸೋಮವಾರಪೇಟೆ), ಅಪ್ಪಣ್ಣ (ಪೊನ್ನಂಪೇಟೆ) ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ನಾಮನಿರ್ದೇಶಿತ ಸದಸ್ಯರಾದ ಚಂದ್ರಕಲಾ, ಗಿರೀಶ್ ಬೋಪಣ್ಣ, ಎಂ.ಅಯ್ಯಪ್ಪ, ಚೆಲುವರಾಜು, ನಂದಿನಿ, ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!