ಮಂಡ್ಯ: ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಸಿ.ಪಿ. ಉಮೇಶ್ ಅಧಿಕಾರ ಸ್ವೀಕಾರ

ಹೊಸದಿಗಂತ ವರದಿ, ಮಂಡ್ಯ
ಮುಂಬರುವ ವಿಧಾನ ಸಭಾ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಜಿಲ್ಲಾದ್ಯಂತ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್ ತಿಳಿಸಿದರು.
ನಗರದ ಬಿಜೆಪಿ ವಿಕಾಸ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಪಕ್ಷ ನನಗೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಮಾಣಿಕವಾಗಿ ನಿರ್ವಹಿಸುತ್ತೇನೆ. ಪಕ್ಷದ ಮೂಲ ಮತ್ತು ಹೊಸ ಕಾರ್ಯಕರ್ತರು ಮುಖಂಡರು, ಪರಿವಾರದ ಮುಖಂಡರ ಸಹಕಾರದಿಂದ ಸಂಘಟನೆ ಮಾಡುವುದಾಗಿ ತಿಳಿಸಿದರು.
ಕೇಂದ್ರದ ವರಿಷ್ಠರು ಹಳೇ ಮೈಸೂರು ಭಾಗಕ್ಕೆ ಹೆಚ್ಚಿನ ಗಮನ ನೀಡಿದ್ದಾರೆ. ಅದರಲ್ಲಿ ಮಂಡ್ಯ ಜಿಲ್ಲೆಯೂ ಸೇರಿದೆ. ಜಿಲ್ಲೆಯ ಏಳೂ ವಿಧಾನ ಸಭಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗುವ ನಿಟ್ಟಿನಲ್ಲಿ ಸಂಘಟನೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ‌್ಯಕರ್ತರೊಂದಿಗೆ ಕಾರ‌್ಯಕರ್ತನಾಗಿ ದುಡಿಯುವುದಾಗಿ ಭರವಸೆ ನೀಡಿದರು.
ಮಂಡ್ಯದಲ್ಲಿ ಕಮಲ ಅರಳುವುದೇ ಎಂದು ಮೂಗು ಮುರಿಯುತ್ತಿದ್ದವರಿಗೆ ಕೆ.ಆರ್. ಪೇಟೆ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಕೆ.ಸಿ. ನಾರಾಯಣಗೌಡ ಅವರು ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ನಾವು ಗೆದ್ದು ತೋರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷ ಸಿ.ಪಿ. ಉಮೇಶ್‌ಗೆ ಅಧಿಕಾರ ಹಸ್ತಾಂತರ ಮಾಡಿದ ನಿರ್ಗಮಿತ ಅಧ್ಯಕ್ಷ ಕೆ.ಜೆ. ವಿಜಯಕುಮಾರ್ ಮಾತನಾಡಿ, ಕಳೆದ ಎರಡೂವರೆ ವರ್ಷಗಳಿಂದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಹಲವಾರು ಸವಾಲುಗಳ ನಡುವೆ ಕೆಲಸ ಮಾಡಿರುವ ತೃಪ್ತಿ ನನಗಿದೆ. ಪಕ್ಷದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಆದರೆ ಚುನಾವಣೆ ಅಥವಾ ಪಕ್ಷ ಸಂಘಟನೆ ವಿಚಾರದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ವಿಭಾಗ ಸಹ ಸಂಘಟನಾ ಕಾರ‌್ಯದರ್ಶಿ ಜೆ.ಕೃಷ್ಣ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಸಿದ್ದರಾಮಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಯಶೋಧಮ್ಮಘಿ, ಮನ್‌ಮುಲ್ ನಿರ್ದೇಶಕಿ ಸುಜಾತಕೃಷ್ಣಘಿ, ನಗರ ಘಟಕದ ಅಧ್ಯಕ್ಷ ವಿವೇಕ್, ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಪ.ನಾ. ಸುರೇಶ್, ಮುಖಂಡರಾದ ಎಚ್.ಆರ್. ಅರವಿಂದ್, ಅಶೋಕ್ ಜಯರಾಂ, ವಸಂತ್‌ಕುಮಾರ್, ಹೊಸಹಳ್ಳಿ ನಾಗೇಶ್ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!