ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಉಗ್ರ ಶಾರಿಕ್ಗೆ ಈ ಹಿಂದೆ ಕೊಯಂಬತ್ತೂರಿನಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದನೇ? ಪ್ರಾಥಮಿಕ ತನಿಖೆಗಳಲ್ಲಿಯೇ ಕೆಲವೊಂದು ಮಾಹಿತಿಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಆ ಆಯಾಮಗಳಲ್ಲಿಯೂ ಪೊಲೀಸ್ ತನಿಖೆ ಸಾಗಿದೆ.
ಈ ಬಗ್ಗೆ ತನಿಖೆ ನಡೆಸಲು ಮಂಗಳೂರು ಪೊಲೀಸರ ತಂಡ ಕೊಯಂಬತ್ತೂರಿಗೆ ತೆರಳಿದೆ. ತಮಿಳುನಾಡಿನ ವಿವಿಧ ನಗರಗಳಲ್ಲಿ ತನಿಖೆ ನಡೆಸುತ್ತಿರುವ ಮಂಗಳೂರು ಪೊಲೀಸರು ಸೆಪ್ಟೆಂಬರ್ನಲ್ಲೇ ತಮಿಳುನಾಡಿನ ಕೊಯಂಬತ್ತೂರು ಸೇರಿದಂತೆ ವಿವಿಧ ನಗರಗಳಲ್ಲಿ ಶಾರಿಕ್ ವಾಸ್ತವ್ಯ ಇದ್ದುದನ್ನು ಪತ್ತೆ ಮಾಡಿದ್ದಾರೆ. ತಮಿಳುನಾಡಿನ ಕೊಯಂಬತ್ತೂರು, ಮಧುರೈ, ನಾಗರಕೊವಿಲ್, ಕನ್ಯಾಕುಮಾರಿಗೂ ಭೇಟಿ ನೀಡಿರುವ ಪೊಲೀಸರು ಆತನ ಓಡಾಟದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.