May 20, 2026
Wednesday, May 20, 2026
spot_img

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಮೊಹಮ್ಮದ್ ಶಾರೀಖ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಖ್‌ಗೆ ಎನ್ಐಎ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಪ್ರಕರಣ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಎನ್‌ಐಎ ವಿಶೇಷ ನ್ಯಾಯಾಲಯವು, ಸೆಕ್ಷನ್ 121 ಎ, ಸೆಕ್ಷನ್ 122, ಸೆಕ್ಷನ್ 326 ಹಾಗೂ ಯುಎಪಿಎ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 94 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಬಳಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಏಕಾಏಕಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಈ ವೇಳೆ ಆರೋಪಿ ಶಾರಿಕ್ ಬಾಂಬ್ ಹೊತ್ತು ಸಾಗಿಸುತ್ತಿದ್ದಾಗಲೇ ಆಕಸ್ಮಿಕವಾಗಿ ಸ್ಫೋಟಗೊಂಡ ಪರಿಣಾಮ ದೊಡ್ಡ ಅನಾಹುತವೊಂದು ತಪ್ಪಿತ್ತು. ಘಟನೆಯಲ್ಲಿ ಶಾರಿಕ್ ಮತ್ತು ಆಟೋ ಚಾಲಕ ಗಾಯಗೊಂಡಿದ್ದರು. ಈ ಸಂಬಂಧ ಕೇಂದ್ರ ಸರ್ಕಾರ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿತ್ತು.

ಪ್ರಕರಣದ ಸುದೀರ್ಘ ವಿಚಾರಣೆ ವೇಳೆ ಎನ್‌ಐಎ ವಿಶೇಷ ನ್ಯಾಯಾಲಯ ಮುಂದೆ ಶಾರಿಕ್ ತನ್ನ ಮೇಲಿರುವ ಎಲ್ಲಾ ಆರೋಪಗಳನ್ನು ಮತ್ತು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದನು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !