ಮಂಗಳೂರಿನ ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ದವಸ ಧಾನ್ಯದಿಂದ ಅರಳಿದ ತಿರಂಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯಲ್ಲಿ ಮಂಗಳೂರಿನಲ್ಲಿ ಜನತೆ ತಮ್ಮನ್ನು ತೊಡಗಿಸಿಕೊಂಡಿದ್ದು, ವೈವಿಧ್ಯಮಯವಾಗಿ ಹಾಗೂ ವರ್ಣರಂಜಿತವಾಗಿ ಆಚರಿಸಿ ಸ್ಮರಣೀಯ ವಾಗಿರಿಸಲು ನಗರದ ಪ್ರಮುಖ ವೃತ್ತಗಳನ್ನು ಅಲಂಕರಿಸಲಾಗಿದೆ.
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ಗುರು ಬೆಳದಿಂಗಳು ಫೌಂಡೇಶನ್ ವತಿಯಿಂದ ಸುಮಾರು 900 ಕೆಜಿ ದವಸ ಧಾನ್ಯಗಳಿಂದ ಶ್ರೀ ಕ್ಷೇತ್ರದ ಅಂಗಣದಲ್ಲಿ ಬೃಹತ್ ತಿರಂಗಾವನ್ನು ವಿಶಿಷ್ಟವಾಗಿ ಭಾನುವಾರ ವಿನ್ಯಾಸಗೊಳಿಸಲಾಯಿತು.

ಸಾಗು, ಹೆಸರುಕಾಳು, ತೊಗರಿ ಬಳಕೆ

300 ಕೆಜಿ ಸಾಗು , 300 ಕೆಜಿ ಹೆಸರುಕಾಳು, 300 ಕೆಜಿ ಕೆಂಪು ತೊಗರಿ ಬಳಸಿ ಒಟ್ಟು 900 ಕೆಜಿ ಧಾನ್ಯಗಳ ಜೊತೆಗೆ ಸಾಬಕ್ಕಿ, ಬೆಂಡೆಕಾಯಿ, ಮೂಲಂಗಿ, ಅಡಕೆ, ಕ್ಯಾರೆಟ್ ಮುಂತಾದ ತರಕಾರಿಗಳನ್ನೂ ಸೇರಿಸಿ ನವ ವಿಧಾನದಲ್ಲಿ ಸುಮಾರು 54 ಕಳಶವಿಟ್ಟು ಅಲಂಕರಿಸಿದ ಸುಂದರ ವಿಭಿನ್ನ ಶೈಲಿಯ ಈ ತಿರಂಗ ಚಿತ್ರಾಕೃತಿ ನೋಡಲು ಜನರು ಉತ್ಸಾಹದಿಂದ ದೇಗುಲಕ್ಕೆ ಆಗಮಿಸುತ್ತಿದ್ದಾರೆ.
ಅಷ್ಟೇ ಅಲ್ಲದೆ ಈ ಕಲಾಸೊಬಗಿಗೆ 108 ಬಾಳೆ ಎಲೆಯನ್ನೂ ಬಳಸಿ ಮತ್ತಷ್ಟು ಮೆರುಗು ಪಡೆಯುವಂತೆ ಮಾಡಲಾಗಿದೆ. ಈ ವಿಭಿನ್ನ ಚಿತ್ರಾಕೃತಿಗೆ ಉಪಯೋಗಿಸಿದ ಚೆಂಡು ಹೂ ಚೆತ್ರಾಕೃತಿಯ ಸೊಬಗು ಹೆಚ್ಚಿಸಿದೆ. ತಾಜಾ ತರಕಾರಿ, ಧಾನ್ಯ ಹಾಗೂ ಹೂಗಳನ್ನು ಬಳಸಿ ಅಮೃತ ಮಹೋತ್ಸವದ ಶುಭ ಘಳಿಗೆಯಲ್ಲಿ ನಿರ್ಮಿಸಿದ ಈ ಚಿತ್ರಾಕೃತಿ ಬರೋಬ್ಬರಿ ಅಂದಾಜು ಸಾವಿರ ಕೆ.ಜಿ ತೂಗುತ್ತದೆ.


ಇನ್ನು ಈ ತಿರಂಗ ಕಲಾಕೃತಿಯನ್ನು ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಅವರು ಭಾನುವಾರ ಉದ್ಘಾಟನೆ ಮಾಡಿ ಯುವಕರ ತಂಡದ ಈ ಕಾರ್ಯವನ್ನು ಶ್ಲಾಘಿಸಿದರು.

ಶನಿವಾರ ರಾತ್ರಿ 9 ಗಂಟೆಯಿಂದ ಭಾನುವಾರ ಬೆಳಿಗ್ಗೆ 9 ಗಂಟೆಯವರೆಗೆ ನಿರಂತರ ಶ್ರಮ ಬಳಸಿ ಈ ತಿರಂಗ ಕಲಾಕೃತಿ ರಚಿಸಲಾಗಿದೆ. 900 ಕೆ.ಜಿ ಧಾನ್ಯಗಳ ಜೊತೆಗೆ 90 ಕೆ.ಜಿ ತರಕಾರಿ ಹಾಗೂ ಒಂದಷ್ಟು ಹೂ ಕೂಡ ಬಳಸಲಾಗಿದೆ. ಅಲ್ಲದೇ ಇದರ ಅಡಿ ಭಾಗದಲ್ಲಿ ಮೂರು ಬಣ್ಣಗಳ ಬಟ್ಟೆಯನ್ನು ಹಾಸಲಾಗಿದ್ದು, ನಿರಂತರ ಶ್ರಮ ಪಡಲಾಗಿದೆ. ಸದ್ಯ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಈ ತಿರಂಗ ಕಲಾಕೃತಿ ಆಕರ್ಷಣೆಯ ಕೇಂದ್ರವಾಗಿದೆ. ಬರುವ ಮಂದಿ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!