ಹೊಸದಿಗಂತ ಡಿಜಿಟಲ್ ಡೆಸ್ಕ್:
ರೀಲ್ಸ್‌ಗಾಗಿ ವಿದ್ಯಾರ್ಥಿಗಳು ಪೆಟ್ರೋಲ್ ಬಾಂಬ್ ಸ್ಪೋಟಿಸಿ ಎಲ್ಲೆ ಮೀರಿ ವರ್ತಿಸಿರುವ ಘಟನೆ ಹಾಸನ ಹೊರವಲಯದ ಬೊಮ್ಮನಾಯಕನಹಳ್ಳಿಯಲ್ಲಿ ನಡೆದಿದೆ.
ಆರ್ಯುವೇದ ಕಾಲೇಜಿನಲ್ಲಿ ಓದುತ್ತಿರುವ ಹಾಸನ ನಗರದ ಇಬ್ಬರು, ಕುಣಿಗಲ್ ತಾಲ್ಲೂಕಿನ ಓರ್ವ ವಿದ್ಯಾರ್ಥಿ ರಾತ್ರಿ ವೇಳೆ ಕಾಲೇಜಿನ ಎದುರಿನ ರಸ್ತೆಯಲ್ಲಿ ಪ್ಲಾಸ್ಟಿಕ್ ಕವರ್‌ಗೆ ಪೆಟ್ರೋಲ್ ತುಂಬಿ, ಅದರ ಮೇಲೆ ಪಟಾಕಿ ಬಾಂಬ್ ಇಟ್ಟು ಬೆಂಕಿ ಹಚ್ಚಿದ್ದಾರೆ. ಪರಿಣಾಮ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ.
ಪೆಟ್ರೋಲ್ ಬಾಂಬ್ ಸ್ಪೋಟಗೊಂಡ ಅನತಿ ದೂರದಲ್ಲಿ ಪೆಟ್ರೋಲ್ ಟ್ಯಾಂಕರ್ ನಿಂತಿದ್ದು ಬಾರಿ ಅನಾಹುತವೊಂದು ತಪ್ಪಿದಂತಾಗಿದೆ. ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆ ಸಮೀಪವೇ ಪೆಟ್ರೋಲ್ ಬಾಂಬ್ ಸ್ಪೋಟಿಸಿ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ
ವಿದ್ಯಾರ್ಥಿಗಳ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಮೂವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿ ಕೋರ್ಟ್‌ಗೆ ಹಾಜರುಪಡಿಸಿ ದಂಡ ವಿಧಿಸಿದ್ದಾರೆ.