Sunday, November 27, 2022

Latest Posts

ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿಗೆ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಆಯ್ಕೆ

ಹೊಸ ದಿಗಂತ ವರದಿ,ಮಂಗಳೂರು:

ಕಡಬ ಸಂಸ್ಮರಣಾ ಸಮಿತಿ ರಥಬೀದಿ ಮಂಗಳೂರು ವತಿಯಿಂದ ನೀಡುವ ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ 2022ಕ್ಕೆ ಹಿರಿಯ ಮದ್ದಳೆಗಾರ ಸುಬ್ರಹ್ಮಣ್ಯ ಶಾಸ್ತ್ರಿ ಮಣಿಮುಂಡ ಆಯ್ಕೆಯಾಗಿದ್ದಾರೆ.

ತೆಂಕುತಿಟ್ಟಿನ ಹೆಸರಾಂತ ಹಿಮ್ಮೇಳವಾದಕ ಕಡಬ ನಾರಾಯಣ ಆಚಾರ್ಯ ಹಾಗೂ ಅವರ ಪುತ್ರ ಕಡಬ ವಿನಯ ಆಚಾರ್ಯ ಅವರ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುತ್ತಿದೆ. ಅ.೯ರಂದು ಮಧ್ಯಾಹ್ನ 1.45 ರಿಂದ ಗುರುಪುರ ಕೈಕಂಬದ ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ತೃತೀಯ ವರ್ಷದ ಪ್ರಶಸ್ತಿ ಪ್ರದಾನ ನಡೆಯಲಿದೆ.

ಮಂಗಳೂರು ರಥಬೀದಿ ಕಾಳಿಕಾಂಬಾ ವಿನಾಯಕ ದೇವಸ್ಥಾನ ೨ನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಅಧ್ಯಕ್ಷತೆ ವಹಿಸುವರು. ಶ್ರೀ ಕ್ಷೇತ್ರ ಕಟೀಲಿನ ಶ್ರೀಹರಿನಾರಾಯಣದಾಸ ಆಸ್ರಣ್ಣ, ಉದ್ಯಮಿಗಳಾದ ಅಗರಿ ರಾಘವೇಂದ್ರ ರಾವ್, ಶ್ರೀಧರ ರಾವ್ ಕೈಕಂಬ, ಗಣೇಶ ಆಚಾರ್ಯ, ರಾಧಾಕೃಷ್ಣ ಭಜನಾ ಯುವಕ ಸಂಘ ಅಧ್ಯಕ್ಷ ಎಂ. ನರಸಿಂಗ ರೈ, ಕಡಬ ಸಂಸ್ಮರಣಾ ಸಮಿತಿ ಗೌರವಾಧ್ಯಕ್ಷ ಜಿ.ಟಿ. ಆಚಾರ್ಯ ಮುಂಬೈ ಭಾಗವಹಿಸುವರು. ಹಿರಿಯ ಅರ್ಥದಾರಿ ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣ ಮಾಡುವರು. ಹಿರಿಯ ಕಲಾವಿದ ಎಂ.ಕೆ. ರಮೇಶ ಆಚಾರ್ಯ ಸಂಸ್ಮರಣಾ ಭಾಷಣ ಮಾಡುವರು. ಈ ಸಂದರ್ಭ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಧರ್ಮೋ ರಕ್ಷತಿ ರಕ್ಷಿತಃ’ ಯಕ್ಷಗಾನ ತಾಳಮದ್ದಳೆ ಆಯೋಜಿಸಲಾಗಿದೆ ಎಂದು ಸಮಿತಿ ಕಾರ್ಯದರ್ಶಿ ಗಿರೀಶ್ ಕಾವೂರು ತಿಳಿಸಿದ್ದಾರೆ.

ಸುಬ್ರಹ್ಮಣ್ಯ ಶಾಸ್ತ್ರಿ ಮಣಿಮುಂಡ:
ಮೂಡಿಗೆರೆ ತಾಲ್ಲೂಕಿನ ಬಣಕಲ್ ಸುಬ್ಬಣ್ಣ ಶಾಸ್ತ್ರೀ ಮತ್ತು ರಮಾದೇವಿ ದಂಪತಿ ಪುತ್ರನಾಗಿ ಜನಿಸಿ ವಿದ್ಯಾಭ್ಯಾಸವನ್ನು ೭ನೇ ತರಗತಿಗೆ ಮೊಟಕುಗೊಳಿಸಿ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾದ ಕೆ.ಗೋವಿಂದ ಭಟ್ಟರಿಂದ ನಾಟ್ಯ ಕಲಿತು ವೇಷಧಾರಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಸುಬ್ರಹ್ಮಣ್ಯ ಶಾಸ್ತ್ರಿ ಅವರು ಧರ್ಮಸ್ಥಳ ಹಾಗೂ ಸುಂಕದಕಟ್ಟೆ ಮೇಳದಲ್ಲಿ ನಿತ್ಯ ವೇಷಗಳನ್ನು ಮಾಡುತ್ತಿರುವಾಗಲೇ ಹಿಮ್ಮೇಳದತ್ತ ಆಕರ್ಷಿತರಾಗಿ ಬಳಿಕ ನಿಡ್ಲೆ ನರಸಿಂಹ ಭಟ್ಟರಿಂದ ಚೆಂಡೆ ಮದ್ದಲೆ ವಾದನವನ್ನು ಅಭ್ಯಸಿಸಿ ಕಡತೋಕ ಮಂಜುನಾಥ ಭಾಗವತರು ಹಾಗೂ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಸಮರ್ಥ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಮತ್ತು ಪುತ್ತೂರು ಮೇಳದಲ್ಲಿ ಸೇವೆಗೈದವರು. ಬಳಿಕ ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ಸುಮಾರು ಮೂರೂವರೆ ದಶಕಗಳ ಕಾಲ ತಿರುಗಾಟದ ನಡೆಸಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದಲ್ಲಿ ನಿರಂತರ ೧೨ ವರ್ಷಗಳ ಕಾಲ ಸೇವೆ ನಡೆಸಿದ್ದಾರೆ. ಇದೀಗ ನಿವೃತ್ತಿ ಜೀವನ ಸಾಗಿಸುತ್ತಿದ್ದಾರೆ.

ಕಡಬದ್ವಯರು:
ಕರಾವಳಿಯ ಹೆಮ್ಮೆಯ ಕಲೆಯಾಗಿರುವ ಯಕ್ಷಗಾನ ಕ್ಷೇತ್ರದ ತೆಂಕುತಿಟ್ಟಿನ ಹೆಸರಾಂತ ಹಿಮ್ಮೇಳವಾದಕರಾಗಿ ಕಡಬ ನಾರಾಯಣ ಆಚಾರ್ಯರು ಸುಮಾರು 3 ದಶಕಗಳ ಕಾಲ ಕಲಾಸೇವೆಗೈದು 2008 ರಲ್ಲಿ ತನ್ನ 51 ನೇ ವಯಸ್ಸಿನಲ್ಲಿ ದಿವಂಗತರಾದರು. ತಂದೆಯಷ್ಟೇ ಪ್ರತಿಭಾನ್ವಿತರಾಗಿದ್ದ ಅವರ ಸುಪುತ್ರ ಕಡಬ ವಿನಯ ಆಚಾರ್ಯ ಅವರು ಅತೀ ಕಿರಿಯ ವಯಸ್ಸಿನಲ್ಲಿ ಸುಮಾರು 15  ವರ್ಷಗಳ ಕಾಲ ಹಿರಿಯ ಕಲಾವಿದರೊಡಗೂಡಿ ಉತ್ತಮ ಮದ್ದಳೆಗಾರನಾಗಿ ಜನ ಮೆಚ್ಚುಗೆ ಗಳಿಸುತ್ತಿರುವ ಸಂದರ್ಭ ತನ್ನ 34 ನೇ ವಯಸ್ಸಿನಲ್ಲಿ ೨೦೧೯ರಲ್ಲಿ ಅನಾರೋಗ್ಯದಿಂದ ಅಕಾಲಿಕವಾಗಿ ಇಹಲೋಕ ತ್ಯಜಿಸಿದ್ದಾರೆ. ಈ ಮಹಾನ್ ಕಲಾವಿದರ ಕಾಯಗಳು ಅಳಿದರೂ ಅವರ ಕೀರ್ತಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿಸುವ ಧ್ಯೇಯವನ್ನು ಹೊಂದಿ ಸಮಾಜದ ಗಣ್ಯರು, ಕಲಾವಿದರು, ಅಭಿಮಾನಿ ಬಂಧು ಬಳಗದವರೆಲ್ಲಾ ಒಟ್ಟು ಸೇರಿ ‘ಕಡಬ ಸಂಸ್ಮರಣಾ ಸಮಿತಿ’ ರಚಿಸಲಾಯಿತು. ಈರ್ವರ ಸ್ಮರಣಾರ್ಥವಾಗಿ ವರ್ಷಂಪ್ರತಿ ಯಕ್ಷಗಾನ ಕ್ಷೇತ್ರದ ಓರ್ವ ಸಾಧಕರನ್ನು ಗುರುತಿಸಿ ನಗದಿನೊಂದಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!