ಮಂಗಳೂರಿಗೆ ಮತ್ತಷ್ಟು ಅಂದ ತಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತ!

ಹೊಸದಿಗಂತ ವರದಿ,ಮಂಗಳೂರು:

ನವ ರೂಪದೊಂದಿಗೆ ಆಕರ್ಷಕ ವಿನ್ಯಾಸದಿಂದ ಪುನರ್ ನಿರ್ಮಾಣಗೊಂಡ ಮಂಗಳೂರಿನ ಕೊಡಿಯಾಲ್ ಬೈಲ್‌ನ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತ ಬುಧವಾರ ಮುಸ್ಸಂಜೆ ಲೋಕಾರ್ಪಣೆಗೊಂಡಿತು.
ಪ್ರಥಮ ಬಾರಿಗೆ ಕನ್ನಡಕ್ಕೆ ರಾಷ್ಟ್ರಕವಿ ಗೌರವ ತಂದುಕೊಟ್ಟ ಮಂಜೇಶ್ವರ ಗೋವಿಂದ ಪೈ ಅವರ ಹೆಸರಿನಲ್ಲಿರುವ ನವೀಕೃತ ವೃತ್ತವನ್ನು ಶಾಸಕ ಡಿ. ವೇದವ್ಯಾಸ ಕಾಮತ್ ಉದ್ಘಾಟಿಸಿದರು.
ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲಾ ರಾವ್, ಮಾಜಿ ಮೇಯರ್‌ಗಳಾದ ದಿವಾಕರ ಪಾಂಡೇಶ್ವರ, ಶಶಿಧರ ಹೆಗ್ಡೆ, ಭಾಸ್ಕರ್ ಕೆ. ಸೇರಿದಂತೆ ಹಲವು ಕಾರ್ಪೊರೇಟರ್‌ಗಳು ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈಗಳು ಕೈಯಲ್ಲಿ ‘ನವಭಾರತ ಪತ್ರಿಕೆ’ಯನ್ನು ಹಿಡಿದು ಓದುತ್ತಾ ಕುಳಿತಿರುವ ಭಂಗಿಯಲ್ಲಿರುವ ಕಂಚಿನ ಪುತ್ಥಳಿ ಇಲ್ಲಿ ಸ್ಥಾಪಿಸಲಾಗಿದೆ.
ವೃತ್ತದ ಒಳಗಿರುವ ಪುರಾತನ ಕಾಲದ ಬಾವಿಯನ್ನು ಹಾಗೆ ಉಳಿಸಲಾಗಿದ್ದು, ಅದರ ನೀರನ್ನೇ ಕಾರಂಜಿಯಂತೆ ವೃತ್ತದಲ್ಲಿ ಚಿಮ್ಮಿಸಿ ಇನ್ನಷ್ಟು ಆಕರ್ಷಣೀಯ ಮಾಡಲಾಗಿದೆ. ವೃತ್ತದ ಒಳಗೆ ಹೂ ಮತ್ತು ಹಚ್ಚಹಸುರಿನ ಹುಲ್ಲಿನ ಮೂಲಕ ಸೌಂದರ್ಯಕ್ಕೆ ಆದ್ಯತೆ ನೀಡಲಾಗಿದೆ. ವೃತ್ತದ ಸುತ್ತಲೂ ಕೆತ್ತನೆಯ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ಸಾಂಪ್ರದಾಯಿಕ ಕುಸುರಿ ಕೆಲಸ ಮಾಡಲಾಗಿದೆ. ಕಾರಂಜಿ ಮತ್ತಿತರ ವಿದ್ಯುತ್ ಅಲಂಕಾರಿಕ ವಸ್ತುಗಳ ಅಳವಡಿಕೆ ನಡೆಸಲಾಗಿದೆ.


ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಈ ವೃತ್ತದ ಪುನರ್ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದೆ. ಫುಜ್ಲಾನಾ ಗ್ರೂಪಿನಿಂದ ಈ ವೃತ್ತದ ನವೀಕರಣದ ಯೋಜನೆ ಮಾಡಲಾಗಿದೆ. ವನಿತಾ ಅಚ್ಯುತ್ ಪೈ ಅವರ ಸ್ಮರಣಾರ್ಥ ಅವರ ಮಕ್ಕಳ ಕೊಡುಗೆಯಾಗಿ ಈ ವೃತ್ತ ರಚನೆಯಾಗಿದೆ.
ವೃತ್ತ ಅನಾವರಣದ ಸಂದರ್ಭದಲ್ಲಿ ಶಾರದಾ ವಿದ್ಯಾಲಯದ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಮನಪಾ ಸಚೇತಕ ಸುರ್ ಶೆಟ್ಟಿ ಕಣ್ಣೂರು, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್ ಮೊದಲಾದವರು ಉಪಸ್ಥಿತರಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!