ದಿಗಂತ ವರದಿ ವಿಜಯಪುರ:
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಜವಳಿ, ಸಕ್ಕರೆ ಹಾಗೂ ಎಪಿಎಂಸಿ ಖಾತೆ ಸಚಿವ ಶಿವಾನಂದ ಪಾಟೀಲ ಕಂಬನಿ ಮಿಡಿದಿದ್ದಾರೆ.
ವಿತ್ತ ಸಚಿವರಾಗಿ, ಪ್ರಧಾನಿಯಾಗಿ ಡಾ. ಮನಮೋಹನ್ ಸಿಂಗ್ ಅವರು ದೇಶಕ್ಕೆ ನೀಡಿರುವ ಕೊಡುಗೆ ಗಮನಾರ್ಹವಾದದ್ದು. ಭಾರತ ಇಂದು ಆರ್ಥಿಕವಾಗಿ ಸದೃಢ ಸ್ಥಿತಿಯಲ್ಲಿದ್ದರೆ ಅದರಲ್ಲಿ ಮನಮೋಹನ ಸಿಂಗ್ ಅವರ ಕೊಡುಗೆಯೂ ಇದೆ. ಅದೇ ರೀತಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ದುಡಿಯುಯವ ಕೈಗಳಿಗೆ ಕೆಲಸ ಕೊಟ್ಟ ಕೀರ್ತಿ ಕೂಡ ಅವರಿಗೆ ಸಲ್ಲುತ್ತದೆ.
ಆಕಸ್ಮಿಕವಾಗಿ ಪ್ರಧಾನಿ ಹುದ್ದೆಗೇರಿದ ಅವರು, ಎರಡು ಅವಧಿಯಲ್ಲಿ ದೇಶದ ಇತಿಹಾಸದ ದಾಖಲೆಗೆ ಸೇರ್ಪಡೆಯಾಗುವಂತಹ ಆಡಳಿತ ನೀಡಿದರು. ಅವರ ಅವಧಿಯ ಜಿಡಿಪಿ ದೇಶದ ಆರ್ಥಿಕ ಸ್ಥಿತಿ ಹೇಗಿತ್ತು ಎಂಬುದನ್ನು ಹೇಳುತ್ತದೆ. ಪ್ರತಿಶತ ನೂರರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿದ್ದು ಕೂಡ ಭಾರತದ ಪ್ರಗತಿಯಲ್ಲಿ ಗಮನಾರ್ಹವಾದದ್ದು ಎಂದು ಶೋಕ ಸಂದೇಶದಲ್ಲಿ ಅವರು ತಿಳಿಸಿದ್ದಾರೆ.