ಪ್ರವಾಸೋದ್ಯಮ ಉತ್ತೇಜನಕ್ಕೆ ಕೊಡಗು ಉತ್ಸವ ಆಯೋಜಿಸುವಂತೆ ಮಂಥರ್ ಗೌಡ ಒತ್ತಾಯ

ಹೊಸದಿಗಂತ ವರದಿ ಮಡಿಕೇರಿ:

ಪ್ರಕೃತಿ ರಮಣೀಯ ತಾಣಗಳನ್ನು ಹೊಂದಿರುವ ದಕ್ಷಿಣ ಕಾಶ್ಮೀರ ಕೊಡಗಿನಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸುವ ಅಗತ್ಯವಿದ್ದು, ಸರ್ಕಾರ “ಕೊಡಗು ಉತ್ಸವ”ವನ್ನು ಆಯೋಜಿಸುವ ಮೂಲಕ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಬೇಕೆಂದು ಕಾಂಗ್ರೆಸ್ ಯುವ ಮುಖಂಡ ಡಾ.ಮಂಥರ್ ಗೌಡ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಅನೇಕ ವರ್ಷಗಳಿಂದ ಲಕ್ಷಾಂತರ ಪ್ರವಾಸಿಗರನ್ನು ಕೊಡಗು ಆಕರ್ಷಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಪ್ರವಾಸೋದ್ಯಮದ ಬೆಳವಣಿಗೆ ಮತ್ತು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಆಸಕ್ತಿ ತೋರುತ್ತಿಲ್ಲವೆಂದು ಟೀಕಿಸಿದ್ದಾರೆ.

ಕೊಡಗಿನಲ್ಲಿ ಪ್ರವಾಸೋದ್ಯಮದಲ್ಲಿ ತೊಡಗಿರುವವರು ಪ್ರವಾಸಿಗರಿಗೆ ಆತಿಥ್ಯ ನೀಡುವ ಮೂಲಕ ಪ್ರವಾಸಿ ಕ್ಷೇತ್ರವನ್ನು ಜೀವಂತವಾಗಿರಿಸಿದ್ದಾರೆ. ಉದ್ಯೋಗ ಸೃಷ್ಟಿಸಿ ಸ್ಥಳೀಯ ಯುವ ಸಮೂಹಕ್ಕೆ ಉದ್ಯೋಗವನ್ನು ನೀಡುತ್ತಿದ್ದಾರೆ. ಅಧಿಕ ತೆರಿಗೆ ಪಾವತಿಸಿ ಸರ್ಕಾರದ ಬೊಕ್ಕಸ ತುಂಬುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಕೊಡಗು ಪ್ರವಾಸಿ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಹೆಸರಿಗೆ ಮಾತ್ರ ಪ್ರವಾಸೋದ್ಯಮ ಇಲಾಖೆ ಇದೆ, ಈ ಇಲಾಖೆಯಿಂದ ಜಿಲ್ಲೆಯ ಪ್ರವಾಸಿ ಕ್ಷೇತ್ರಕ್ಕೆ ಏನು ಲಾಭವಾಗಿದೆ ಎನ್ನುವ ಬಗ್ಗೆ ಸರ್ಕಾರವೇ ಉತ್ತರಿಸಬೇಕಿದೆ ಎಂದು ತಿಳಿಸಿದ್ದಾರೆ.

2019 ರಲ್ಲಿ ಅತಿವೃಷ್ಟಿ ಹಾನಿಯ ಕಹಿನೆನಪುಗಳನ್ನು ಮರೆಸಲು ಅಂದು ಮೈತ್ರಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಾ.ರಾ.ಮಹೇಶ್ ಅವರು “ಕೊಡಗು ಉತ್ಸವ” ಆಯೋಜಿಸಿ ಹೊಸ ಮೆರುಗನ್ನು ನೀಡಿದ್ದರು. ಆದರೆ ನಂತರ ಬಂದ ಸರ್ಕಾರ ಈ ರೀತಿಯ ಉತ್ಸವಗಳನ್ನೇ ಆಯೋಜಿಸಿಲ್ಲ. ಈಗಿನ ಉಸ್ತುವಾರಿ ಸಚಿವರು ಎಲ್ಲಿದ್ದಾರೆ ಎಂದೇ ತಿಳಿದಿಲ್ಲ. ಕನಿಷ್ಟ ಮಡಿಕೇರಿ, ಗೋಣಿಕೊಪ್ಪ ದಸರಾ ಅನುದಾನವನ್ನಾದರೂ ಸರ್ಕಾರ ಬಿಡುಗಡೆ ಮಾಡಬಹುದಿತ್ತು. ಹಣ ಸಿಗದೆ ಇಂದು ದಸರಾ ಸಮಿತಿಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಬಗ್ಗೆ ಸ್ಥಳೀಯ ಶಾಸಕರಾದರೂ ಆಸಕ್ತಿ ತೋರಬೇಕಾಗಿದೆ ಎಂದು ತಿಳಿಸಿದ್ದಾರೆ.

ಅಕಾಲಿಕ ಮಳೆ, ವನ್ಯಜೀವಿಗಳ ದಾಳಿ, ಕೃಷಿ ನಿರ್ವಹಣಾ ವೆಚ್ಚ ದುಬಾರಿ, ನಿರುದ್ಯೋಗ ಸಮಸ್ಯೆ ಮತ್ತಿತರ ಕೊರತೆಗಳ ನಡುವೆ ಜಿಲ್ಲೆಯ ಕೃಷಿಕ ವರ್ಗ ಕೃಷಿ ಚಟುವಟಿಕೆಯನ್ನು ಕೈಬಿಟ್ಟು ಹೋಂಸ್ಟೇ, ವ್ಯಾಪಾರದಂತಹ ಪ್ರವಾಸೋದ್ಯಮಕ್ಕೆ ಪೂರಕವಾದ ಕ್ಷೇತ್ರಗಳತ್ತ ಮುಖ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಕೂಡಾ ಇದಕ್ಕೆ ಉತ್ತೇಜನ ನೀಡುವ ಕಾರ್ಯವನ್ನು ಕೈಗೊಳ್ಳಬೇಕು.

ಪ್ರವಾಸೋದ್ಯಮವನ್ನು ಬೆಳೆಸಲು ಮತ್ತು ಪ್ರೋತ್ಸಾಹಿಸಲು “ಕೊಡಗು ಉತ್ಸವ”ವನ್ನು ತುರ್ತಾಗಿ ಆಯೋಜಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕೊಡಗು ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಿಸಬೇಕು. ಜಿಲ್ಲೆಯ ಪ್ರತಿ ರಸ್ತೆಗಳ ಅಭಿವೃದ್ಧಿ ಕಾರ್ಯವನ್ನು ತಕ್ಷಣ ಆರಂಭಿಸಬೇಕೆಂದು ಡಾ.ಮಂಥರ್ ಗೌಡ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!