ಹನ್ನೆರಡೇ ವಾರದಲ್ಲಿ 2ಅಂತಸ್ತಿನ 3D ಪ್ರಿಂಟೆಡ್‌ ವಸತಿಘಟಕ ನಿರ್ಮಿಸಿದ ಸೇನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತೀಯ ಸೇನೆಯು ಗುಜರಾತ್‌ನ ಅಹಮದಾಬಾದ್ ಕ್ಯಾಂಟ್‌ನಲ್ಲಿ ಸೈನಿಕರಿಗಾಗಿ ತನ್ನ ಮೊದಲ 3D ಮುದ್ರಿತ ವಸತಿ ಘಟಕವನ್ನು ಅನಾವರಣಗೊಳಿಸಿದೆ. ಎರಡು ಅಂತಸ್ತುಗಳನ್ನು (ಗ್ರೌಂಡ್‌ ಪ್ಲಸ್‌ ಒನ್‌) ಈ ಕಟ್ಟಡ ಹೊಂದಿದ್ದು ಭಾರತೀಯ ಸೇನೆಯ ಮಿಲಿಟರಿ ಎಂಜಿನಿಯರಿಂಗ್ ಸೇವೆ (MES) ವಿಭಾಗ ಹಾಗು MiCoB ಪ್ರೈವೇಟ್ ಲಿಮಿಟೆಡ್‌ನ ಸಹಯೋಗದೊಂದಿಗೆ ಅತ್ಯಾಧುನಿಕ 3D ಕ್ಷಿಪ್ರ ನಿರ್ಮಾಣ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾಗಿದೆ.

ಕೇವಲ ಹನ್ನೆರಡೇ ವಾರಗಳಲ್ಲಿ ಈ ಕಟ್ಟಡದ ನಿರ್ಮಾಣವಾಗಿದ್ದು 3D ಪ್ರಿಂಟರ್‌ ಗಳ ಮೂಲಕ ವಿಶೇಷ ಕಾಂಕ್ರೀಟ್‌ ಅನ್ನು ಬಳಸಿಕೊಂಡು ಲೇಯರ್‌ ಬೈ ಲೇಯರ್‌ ತಂತ್ರಜ್ಞಾನದ ಮೂಲಕ ಕಟ್ಟಡವನ್ನು ನಿರ್ಮಿಸಲಾಗಿದೆ. “3ಡಿ ಮುದ್ರಿತ ಅಡಿಪಾಯ, ಗೋಡೆಗಳು ಮತ್ತು ಸ್ಲ್ಯಾಬ್‌ಗಳನ್ನು ಬಳಸಿಕೊಂಡು ಗ್ಯಾರೇಜ್ ಸ್ಥಳದೊಂದಿಗೆ 71 ಚದರ ಮೀಟರ್ ಅಳತೆಯ ವಸತಿ ಘಟಕದ ನಿರ್ಮಾಣ ಕಾರ್ಯವನ್ನು ಕೇವಲ 12 ವಾರಗಳಲ್ಲಿ ಪೂರ್ಣಗೊಳಿಸಲಾಗಿದೆ” ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಈ ಕಟ್ಟಡವು ವಿಪತ್ತು-ನಿರೋಧಕ ರಚನೆಗಳು ಭೂಕಂಪ ಪ್ರತಿರೋಧಕ ವಿಶೇಷಣಗಳು ಮತ್ತು ಹಸಿರು ಕಟ್ಟಡದ ಮಾನದಂಡಗಳನ್ನು ಒಳಗೊಂಡಿದೆ. ಈ ನಿರ್ಮಾಣವು ‘ಆತ್ಮನಿರ್ಭರ್ ಭಾರತ್ ಅಭಿಯಾನ’ವನ್ನು ಬೆಳೆಸುವಲ್ಲಿ ಭಾರತೀಯ ಸೇನೆಯ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಸಚಿವಾಲಯ ಹೇಳಿದೆ.

ಈ ತಂತ್ರವು ಕಾಂಕ್ರೀಟ್ 3D ಪ್ರಿಂಟರ್ ಅನ್ನು ಬಳಸುತ್ತದೆ, ಅದು ಗಣಕೀಕೃತ ಮೂರು ಆಯಾಮದ ವಿನ್ಯಾಸದ ಮೂಲಕ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ವಿಶೇಷ ರೀತಿಯ ಕಾಂಕ್ರೀಟ್ ಅನ್ನು ಹೊರತೆಗೆಯುವ ಮೂಲಕ ಲೇಯರ್-ಬೈ-ಲೇಯರ್ ರೀತಿಯಲ್ಲಿ 3-D ರಚನೆಯನ್ನು ರೂಪಿಸುತ್ತದೆ. ಈ ರಚನೆಗಳನ್ನು ಪ್ರಸ್ತುತ ಪರೀಕ್ಷಿಸಲಾಗುತ್ತಿದೆ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಸೇರಿದಂತೆ ವಿವಿಧ ಭೂಪ್ರದೇಶಗಳಲ್ಲಿ ಬಳಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!