ಮ್ಯಾನುವಲ್ ಸ್ಕ್ಯಾವೆಂಜಿಂಗ್ ನಡೆದರೆ ಕ್ರಿಮಿನಲ್ ಕೇಸ್: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಏಪ್ರಿಲ್ 1ರಿಂದ ಮ್ಯಾನ್ ಹೋಲ್, ಪಿಟ್ ಗುಂಡಿಯನ್ನು ಸ್ವಚ್ಛಗೊಳಿಸಲು ಮಾನವ ಸಂಪನ್ಮೂಲ ಬಳಸಿದರೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪ್ರಾಧಿಕಾರವನ್ನು ನೇರ ಹೊಣೆಯನ್ನಾಗಿಸಿ ಕಾನೂನಿನ ರೀತಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳ ಹಸ್ತಚಾಲಿತ ಶುಚಿಗೊಳಿಸುವಿಕೆಯನ್ನು ತೊಡೆದುಹಾಕುವ ಬಗ್ಗೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಅನುಷ್ಠಾನಕೈಗೊಳ್ಳುವ ಸಂಬಂಧ ಮಂಗಳವಾರ ವಿಕಾಸಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಈ ಎಚ್ಚರಿಕೆ ನೀಡಿದರು.

ಮ್ಯಾನ್ ಹೋಲ್, ಪಿಟ್ ಗುಂಡಿಯನ್ನು ಸ್ವಚ್ಛಗೊಳಿಸಲು ಮಾನವ ಸಂಪನ್ಮೂಲವನ್ನು ಬಳಸಿದರೆ ಸಂಬಂಧಪಟ್ಟ ಪ್ರಾಧಿಕಾರವನ್ನು ನೇರ ಹೊಣೆಯನ್ನಾಗಿಸಿ, ಕ್ರಿಮಿನಲ್ ಕೇಸ್ ಮಾಡಲಾಗುತ್ತದೆ. ಪಿಟ್‌ಗುಂಡಿ, ಮ್ಯಾನ್ ಹೋಲ್, ಯುಜಿಡಿಗಳನ್ನು ಸಚ್ಛಗೊಳಿಸಲು ಸಾರ್ವಜನಿಕರು ದೂರು ನೀಡಲು ಟೋಲ್ ಫ್ರೀ ನಂಬರ್ ಪ್ರಾರಂಭಿಸಿದ್ದು 24 ತಾಸುಗಳೊಳಗಾಗಿ ದೂರನ್ನು ಇತ್ಯರ್ಥಪಡಿಸಲು ಕ್ರಮಕೈಗೊಳ್ಳಬೇಕೆಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಏ. 5-10ರೊಳಗೆ ಕ್ರಿಯಾ ಯೋಜನೆ ಮಂಡನೆ
ರಾಜ್ಯದ ಬಿಡಬ್ಲ್ಯೂಎಸ್‌ಎಸ್‌ಬಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ದುರಸ್ಥಿಯಲ್ಲಿರುವ ಯಂತ್ರಗಳನ್ನು ಮಾ. 30ರೊಳಗಾಗಿ ದುರಸ್ತಿಗೊಳಿಸಬೇಕು. ರಾಷ್ಟ್ರೀಯ ಕ್ರಿಯಾಯೋಜನೆಯಂತೆ ಸಕ್ಕಿಂಗ್, ಜಟ್ಟಿಂಗ್ ಯಂತ್ರಗಳನ್ನು ನಿರ್ವಹಿಸಲು ಕಾರ್ಮಿಕರಿಗೆ ಉತ್ತಮ ರೀತಿಯ ತರಬೇತಿ ನೀಡುವುದು ಮತ್ತು ಯಂತ್ರಗಳ ನಿರ್ವಹಣೆಗೆ ತಕ್ಕಂತೆ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ರಾಷ್ಟ್ರೀಯ ಕ್ರಿಯಾಯೋಜನೆಯಲ್ಲಿರುವ ಎಲ್ಲಾ ಅಂಶಗಳನ್ನು ಅಳವಡಿಸಿಕೊಂಡು ಮುಂದಿನ ತಿಂಗಳ 5 ರಿಂದ 10ರೊಳಗೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಸಭೆಗೆ ಹಾಜರಾಗಿ ಕ್ರಿಯಾ ಯೋಜನೆಯನ್ನು ಮಂಡಿಸಬೇಕು ಎಂದು ಸಚಿವರು ತಿಳಿಸಿದರು.

ಕರ್ನಾಟಕ ರಾಜ್ಯದಲ್ಲಿ 1993ರಿಂದ ಇಲ್ಲಿಯವರೆಗೆ ಮ್ಯಾನ್ ಹೋಲ್ ಸೆಪ್ಟಿಕ್ ಟ್ಯಾಂಕ್, ಒಳಚರಂಡಿ, ಗಟಾರಗಳನ್ನು ಸ್ವಚ್ಛಗೊಳಿಸಲು ಹೋಗಿ 90 ಜನ ಮೃತಪಟ್ಟಿದ್ದಾರೆ. ಮೃತಪಡಲು ಕಾರಣಗಳ ಬಗ್ಗೆ ಚರ್ಚಿಸಿ ಎಂ.ಎಸ್ ಕಾಯ್ದೆ ಮತ್ತು ನಿಯಮಗಳು 2013ನ್ನು ಅನುಷ್ಠಾನಗೊಳಿಸಲು ಕ್ರಮವಹಿಸಲಾಯಿತು. ಮಾನವ ಪ್ರವೇಶವನ್ನು ರದ್ದುಗೊಳಿಸಿ ಲಭ್ಯ ಇರುವ ಆಧುನಿಕ ತಂತ್ರಜ್ಞಾನವುಳ್ಳ ಯಂತ್ರಗಳ ಮೂಲಕ ಒಳಚರಂಡಿ ವ್ಯವಸ್ಥೆ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವುದು. ಅನಿವಾರ್ಯ ತುರ್ತು ಸಂದರ್ಭಗಳಲ್ಲಿ ಚರಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸುರಕ್ಷಿತವಾಗಿ ಸ್ವಚ್ಛಗೊಳಿಸಲು ವ್ಯವಸ್ಥೆಗಳನ್ನು ಮಾಡುವುದು, ಯಾವುದೇ ಅನಧಿಕೃತ ವ್ಯಕ್ತಿ/ಸಂಸ್ಥೆ ಈ ಕೆಲಸವನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.
ಈ ಹಿಂದೆ ಕೈಯಾರೆ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದ ವ್ಯಕ್ತಿಗಳಿಗೆ ಪುನರ್ವಸತಿ ಕಲ್ಪಿಸಲು ಸೂಚಿಸಲಾಯಿತು.

ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳ ಹಸ್ತಚಾಲಿತ ಶುಚಿಗೊಳಿಸುವಿಕೆಯನ್ನು ತೊಡೆದುಹಾಕುವ ರಾಜ್ಯ ಕ್ರಿಯಾ ಯೋಜನೆಯಲ್ಲಿ ಇರಬೇಕಾದ ಅಂಶಗಳ ಬಗ್ಗೆ ಪಿಪಿಟಿ ಮೂಲಕ ಪ್ರದರ್ಶಿಸಲಾಯಿತು. ಪೌರಾಡಳಿತ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಸಿದ್ಧಪಡಿಸಿರುವಂತಹ ಕ್ರಿಯಾ ಯೋಜನೆಯ ಅಂಶಗಳನ್ನು ತಿಳಿಸಲಾಯಿತು.

ಸಭೆಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಶಿವಣ್ಣ ಕೋಟೆ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್. ಹನುಮಂತಪ್ಪ, ಸದಸ್ಯರಾದ ರಾಮುಲು ಮತ್ತು ವಿಜಯಕುಮಾರ್-ಅಡಕಿ ಹಾಗೂ ನಗರಾಭಿವೃದ್ಧಿ ಇಲಾಖೆ-ಅಪರ ಮುಖ್ಯ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳು ಸಹಿತ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!