ವಿಪಕ್ಷಗಳಿಂದ ಅನೇಕರು ಬಿಜೆಪಿ ಸೇರ್ಪಡೆಯಾಗಲು ಸಿದ್ದರಿದ್ದಾರೆ: ಮುಖ್ಯಮಂತ್ರಿ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌  

ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಖಾಸಗಿ ಹೋಟೆಲ್ ನಲ್ಲಿ ನಡೆದ ಪ್ರಮುಖ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ವಿಪಕ್ಷಗಳಲ್ಲಿರುವ ಅನೇಕರು ಪಕ್ಷ ಸೇರ್ಪಡೆಯಾಗಲು ಸಿದ್ದರಿದ್ದಾರೆ, 2023ಕ್ಕೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

ಪಂಚ ರಾಜ್ಯಗಳ ಚುನಾವಣೆ ಬಳಿಕ, ನನ್ನ ಬಳಿ ವಿಪಕ್ಷದ ಶಾಸಕರು ಬಂದಿದ್ದರು.ಸಂಯಮ ಇರಲಿ, ಶಾಂತಿಯಾಗಿರಿ, ಬದಲಾವಣೆ ಬಂದಾಗ ಬರುವಂತೆ ಸೂಚಿಸಿದ್ದೇನೆ ಎಂದು ಸಿಎಂ ಹೇಳುವ ಮೂಲಕ ವಿಪಕ್ಷಗಳಿಗೆ ಶಾಕ್ ನೀಡಿದರು.

ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. ಬಹಳ ಜನ ಬಹಳ ವರ್ಷ ದಕ್ಷಿಣ ಕರ್ನಾಟಕ ಅಂದರೆ ನಮ್ಮ ಕೈಯಲ್ಲಿ, ಕಪಿ ಮುಷ್ಠಿಯಲ್ಲಿರೋ ಪ್ರದೇಶ ಅನ್ನುತ್ತಿದ್ದರು. ದಕ್ಷಿಣ ಕರ್ನಾಟಕದ ಜನ ರಾಜಕೀಯದಲ್ಲಿ ಪ್ರಬುದ್ದರು. ಮೈಸೂರು ಮಹಾರಾಜರು ಆಳಿದ ಪ್ರದೇಶ. ಆ ಕಾಲದಲ್ಲೇ ಏಷ್ಯಾದ ವಿದ್ಯುತ್ ಕಾರ್ಖಾನೆ, ಚಿನ್ನದ ಗಣಿ, ಎಲ್ಲವನ್ನೂ ಹೊಂದಿದ್ದ ಪ್ರದೇಶ. ಎರಡು ಪಕ್ಷಗಳ ಬೆಂಬಲ ಮಾಡುತ್ತಾ ಮಾಡುತ್ತಾ ಬದಲಾವಣೆ ಮಾಡಲು ಎಲ್ಲರೂ ಅವಕಾಶ ಕೋರುತ್ತಿದ್ದಾರೆ ಎಂದರು.

ಪ್ರಧಾನಿ ಮೋದಿಯವರ ಮೇಲೆ ವಿಶ್ವಾಸಾರ್ಹತೆ ಇದೆ. ತುಷ್ಠೀಕರಣ ರಾಜಕಾರಣ ಸರಿಯಲ್ಲ.ಎಲ್ಲರಿಗೂ ಸಮನಾದ ಅವಕಾಶ ನೀಡುವ ರಾಜಕಾರಣ ಬೇಕಿದೆ.ಇದು ನಮ್ಮ ನಾಯಕರ ಸಂಕಲ್ಪ ಎಂದರು.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ವಿಶ್ವಾಸ್, ಸಬ್ ಕಾ ಪ್ರಯಾಸ್. ದೇಶಕ್ಕಾಗಿ 24ಗಂಟೆಗಳ ಕಾಲ ಕೆಲಸ ಮಾಡುತ್ತಿರುವ ವ್ಯಕ್ತಿ ನರೇಂದ್ರ ಮೋದಿ. ಕೊರೋನಾ ಬಂದಾಗ ಇಡೀ ದೇಶಕ್ಕೆ ಲಸಿಕೆ ಕೊಡಿಸುವ ಕೆಲಸ ಮಾಡಿದರು. ಅಷ್ಟೇ ಅಲ್ಲ, ಬಡ ರಾಷ್ಟ್ರಗಳಿಗೂ ಉಚಿತವಾಗಿ ನೀಡುವ ಕೆಲಸ ಮಾಡಲಾಯಿತು. ಎಲ್ಲಾ ವರ್ಗದ ಜನರಿಗೆ ಅವಕಾಶ ನೀಡಿದ್ದಾರೆ. ರಾಜ್ಯದ ಬಜೆಟ್ ಆದ ಬಳಿಕ ಜನ ಮತ್ತಷ್ಟು ವಿಶ್ವಾಸ ಇಟ್ಟಿದ್ದಾರೆ. ಎಲ್ಲರಿಗೂ ಆಶ್ಚರ್ಯಪಡುವ ಬಜೆಟ್ ನೀಡಿದ್ದು, ಎಲ್ಲರಿಗೂ ತಲುಪುವ ಕೆಲಸ ಮಾಡಿದ್ದೇವೆ. ಬಜೆಟ್ ಕೊಡೋದು ಅಷ್ಟೇ ಅಲ್ಲದೆ, ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ಕೂಡ ಮಾಡುತ್ತಿದ್ದೇವೆ. ನಮ್ಮ ಸಾಧನೆ ಜನರ ಮುಂದಿಟ್ಟು, ಮತ ಕೇಳುತ್ತೇವೆ. ಮತ್ತೆ ರಾಜ್ಯದಲ್ಲಿ 150+ ಸೀಟುಗಳು ಗೆಲ್ಲುವ ಮೂಲಕ, ವಿಧಾನಸೌಧದಲ್ಲಿ ಆಡಳಿತ ನೀಡುತ್ತೇವೆ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!