ಹೊಸ ದಿಗಂತ ವರದಿ, ಅಂಕೋಲಾ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿರುವುದಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಾಳಿಕಟ್ಟಿ ತಿಳಿಸಿದರು.
ರಾತ್ರಿ 1 ಗಂಟೆ ವರೆಗೆ ಹೊಸ ವರ್ಷದ ಸಂಭ್ರಮಾಚರಣೆಗೆ ಅವಕಾಶ ಕಲ್ಪಿಸಲಾಗಿದ್ದು ಹೊರಾಂಗಣ ಮತ್ತು ಒಳಾಂಗಣದ ಸಂಭ್ರಮಾಚರಣೆ ಸಮಯದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸಂಬಂಧಿಸಿದ ಆಯೋಜಕರು ಕ್ರಮ ಕೈಗೊಳ್ಳಬೇಕು ಎಂದ ಅವರು, ಈಗಾಗಲೇ ಪ್ರಮುಖ ರೆಸಾರ್ಟ್, ಹೊಟೇಲ್, ಹೋಮ್ ಸ್ಟೇಗಳಿಗೆ ಕೋವೀಡ್ ನಿಯಮ ಪಾಲಿಸುವಂತೆ ಸೂಚನೆ ನೀಡಲಾಗಿದೆ, ಪ್ರವಾಸಿಗರಲ್ಲಿ ಜ್ವರ ಅಥವಾ ಕೊರೋನಾ ಲಕ್ಷಣಗಳು ಕಂಡು ಬಂದರೆ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿ ಕೋವೀಡ್ ತಪಾಸಣೆ ನಡೆಸಲು ತಿಳಿಸಲಾಗಿದೆ ಎಂದು ಅವರು ತಿಳಿಸಿದರು.
ಹೊಸ ವರ್ಷದ ಸಂಭ್ರಮಾಚರಣೆಗೆ ರಾಜ್ಯ ಸರ್ಕಾರ ಹೊರಡಿಸಿರುವ ನಿಯಮಗಳನ್ನೇ ಜಿಲ್ಲೆಯಲ್ಲಿ ಜಾರಿ ಮಾಡಲಾಗಿದ್ದು ಉಳಿದಂತೆ ಯಾವುದೇ ಹೊಸ ಕಠಿಣ ನಿಯಮಗಳನ್ನು ಜಿಲ್ಲಾಡಳಿತದಿಂದ ಜಾರಿ ಮಾಡಿಲ್ಲ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಾಳಿಕಟ್ಟಿ ತಿಳಿಸಿದರು.