November 7, 2026
Saturday, November 7, 2026
spot_img

ಹಾಸನಾಂಬೆ ದರುಶನಕ್ಕೆ ಜನಸಾಗರ: 9 ದಿನದಲ್ಲಿ 20 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ, 18.50 ಕೋಟಿ ರೂ. ದಾಖಲೆ ಆದಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವರ್ಷಕ್ಕೊಮ್ಮೆ ಮಾತ್ರ ದರುಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆಯ ದರುಶನಕ್ಕೆ ಭಕ್ತರ ಮಹಾಪೂರವೇ ಹರಿದುಬರುತ್ತಿದೆ.

ನವೆಂಬರ್ 7ರಂದು ಒಂಬತ್ತನೇ ದಿನದ ದರುಶನೋತ್ಸವ ಭಕ್ತಿಭಾವದಿಂದ ನೆರವೇರಿದ್ದು, ಇದುವರೆಗೆ 20 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರುಶನ ಪಡೆದಿದ್ದಾರೆ. ಮತ್ತೊಂದೆಡೆ, ಪ್ರವೇಶ ಟಿಕೆಟ್ ಮತ್ತು ಲಡ್ಡು ಪ್ರಸಾದ ಮಾರಾಟದಿಂದಲೇ ಬರೋಬ್ಬರಿ 18.50 ಕೋಟಿ ರೂ.ಗೂ ಅಧಿಕ ಆದಾಯ ಸಂಗ್ರಹವಾಗಿದ್ದು, ಈ ಬಾರಿಯ ಜಾತ್ರೆ ಹೊಸ ದಾಖಲೆ ನಿರ್ಮಿಸಿದೆ.

ಅಕ್ಟೋಬರ್ 29ರಂದು ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಾಗಿದ್ದು, ಅಕ್ಟೋಬರ್ 30ರಿಂದ ಸಾರ್ವಜನಿಕರಿಗೆ ದರುಶನಕ್ಕೆ ಅವಕಾಶ ನೀಡಲಾಗಿದೆ. ಸಾಮಾನ್ಯ ದರುಶನಕ್ಕೆ 6ರಿಂದ 8 ಗಂಟೆಗಳವರೆಗೆ ಕಾಯಬೇಕಾದ ಪರಿಸ್ಥಿತಿಯಿದ್ದು, 1,000 ರೂ. ವಿಶೇಷ ದರ್ಶನಕ್ಕೂ 3ರಿಂದ 4 ಗಂಟೆಗಳ ಸರತಿ ಕಂಡುಬರುತ್ತಿದೆ.

ಇದನ್ನೂ ಓದಿ:

ಒಂಬತ್ತನೇ ದಿನದಂದು ಹಿರಿಯ ನಟಿ ಸುಧಾರಾಣಿ, ನಟ ಶ್ರೀನಗರ ಕಿಟ್ಟಿ, ನಟಿ ಭವ್ಯಗೌಡ, ನಿರ್ಮಾಪಕ ಸುರೇಶ್ ಸೇರಿದಂತೆ ಚಿತ್ರರಂಗದ ಗಣ್ಯರು ದೇವಿಯ ದರುಶನ ಪಡೆದರು. ಶಾಸಕರಾದ ಕರೆಮ್ಮ ನಾಯಕ್, ಹೆಚ್.ಕೆ. ಸುರೇಶ್, ಸಿ.ಎನ್. ಬಾಲಕೃಷ್ಣ ಸೇರಿದಂತೆ ಹಲವು ರಾಜಕೀಯ ನಾಯಕರು ಕೂಡ ಹಾಸನಾಂಬೆಯ ಆಶೀರ್ವಾದ ಪಡೆದರು.

ಹಾಸನ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ ಎಂದು ತಿಳಿಸಿದರು.

ಇನ್ನು ದೇವಾಲಯದ ಬಾಗಿಲು ಮುಚ್ಚಲು ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ. ನವೆಂಬರ್ 8ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ದೇವಿಯ ದರುಶನ ಪಡೆಯಲಿದ್ದಾರೆ.

Must Read

Skip to toolbar