ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಇತ್ತೀಚೆಗೆ ಅಗ್ನಿ ಅವಘಡಗಳು ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಭಯ ಮೂಡಿಸಿದೆ. ಇದೀಗ ಅಂತಹುದೇ ಮತ್ತೊಂದು ಘಟನೆ ನಗರದಲ್ಲಿ ನಡೆದಿದೆ.
ಕೆಆರ್ ಮಾರುಕಟ್ಟೆ ಸಮೀಪದಲ್ಲಿರುವ ಕುಂಬಾರಪೇಟೆಯ ಕಟ್ಟಡವೊಂದರ ಮೂರನೇ ಮಹಡಿಯಲ್ಲಿದ್ದ ಮಕ್ಕಳ ಆಟದ ಸಾಮಾನು ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಗೋದಾಮಿನಲ್ಲಿ ನಿನ್ನೆ ರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಅಂಗಡಿ ಹೊತ್ತಿ ಉರಿದಿದೆ. ಅಲ್ಲದೇ ಬೆಂಕಿಯು 6ನೇ ಮಹಡಿವರೆಗೂ ವ್ಯಾಪಿಸಿದೆ.
ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಈ ಅವಘಡದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ.