October 15, 2026
Thursday, October 15, 2026
spot_img

ದೆಹಲಿಯಲ್ಲಿ ಭೀಕರ ಅಗ್ನಿ ಅನಾಹುತ: ಎಸಿ ಸ್ಫೋಟದಿಂದ 9 ಮಂದಿ ದುರ್ಮರಣ, 20 ಜನರ ರಕ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿಯ ವಿವೇಕ್ ವಿಹಾರ ಪ್ರದೇಶದ ವಸತಿ ಸಂಕೀರ್ಣವೊಂದರಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ ಒಂಬತ್ತು ಜನರು ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ ಸುಮಾರು 20 ಜನರನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ವಿವೇಕ್ ವಿಹಾರದಲ್ಲಿರುವ ನಾಲ್ಕು ಅಂತಸ್ತಿನ ವಸತಿ ಕಟ್ಟಡದಲ್ಲಿ ಈ ಅನಾಹುತ ಸಂಭವಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಕಟ್ಟಡದಲ್ಲಿದ್ದ ಎಸಿ ಸ್ಫೋಟಗೊಂಡಿದ್ದೇ ಬೆಂಕಿ ಹತ್ತಿಕೊಳ್ಳಲು ಕಾರಣ ಎನ್ನಲಾಗಿದೆ. ಬೆಂಕಿಯ ಜ್ವಾಲೆಗಳು ಕ್ಷಣಾರ್ಧದಲ್ಲಿ 2, 3 ಮತ್ತು 4ನೇ ಮಹಡಿಗಳಿಗೆ ವ್ಯಾಪಿಸಿದ್ದು, ನಿವಾಸಿಗಳು ಹೊರಬರಲಾಗದೆ ಸಿಲುಕಿಕೊಂಡಿದ್ದರು.

ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ಶಹದಾರಾ ಜಿಲ್ಲಾ ಡಿಸಿಪಿ ರಾಜೇಂದ್ರ ಪ್ರಸಾದ್ ಮೀನಾ ಅವರು ನೀಡಿರುವ ಮಾಹಿತಿ ಪ್ರಕಾರ, ಬೆಂಕಿಯ ತೀವ್ರತೆ ಹೆಚ್ಚಿದ್ದ ಎರಡನೇ ಮಹಡಿಯಿಂದ ಒಂಬತ್ತು ಶವಗಳನ್ನು ಹೊರತೆಗೆಯಲಾಗಿದೆ.

“ಬೆಂಕಿಯನ್ನು ಈಗ ಸಂಪೂರ್ಣವಾಗಿ ನಂದಿಸಲಾಗಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ. ಧೂಮ ಮತ್ತು ಬೆಂಕಿಯ ನಡುವೆಯೂ ಹತ್ತಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಹೊರತರಲಾಗಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಟ್ಟಡದೊಳಗೆ ಯಾರಾದರೂ ಸಿಲುಕಿದ್ದಾರೆಯೇ ಎಂದು ಪತ್ತೆಹಚ್ಚಲು ಶೋಧ ಕಾರ್ಯ ಮುಂದುವರಿದಿದೆ.

Must Read