ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕೊರಿಯಾದ ಆಗ್ನೇಯ ಭಾಗಗಳಲ್ಲಿ ಭೀಕರ ಕಾಡ್ಗಿಚ್ಚು ಸಂಭವಿಸಿದ್ದು, 24 ಮಂದಿ ಸಾವನ್ನಪ್ಪಿದ್ದು, 200 ಕಟ್ಟಡಗಳಿಗೆ ಹಾನಿಯಾಗಿದೆ.
ಉತ್ತರ ಜಿಯೋಂಗ್ ಸಾಂಗ್ ಪ್ರಾಂತ್ಯದ ಸ್ಯಾಚಿಯಾಂಗ್ ಕೌಂಟಿಯಲ್ಲಿ ಮಾ. 21ರಂದು ಸಂಜೆ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ರಾಜಧಾನಿ ಸಿಯೋಲ್‌ನಿಂದ ಸುಮಾರು 180 ಕಿ.ಮೀ ಆಗ್ನೇಯಕ್ಕಿರುವ ಉಯಿಸಿಯಾಂಗ್ ಕೌಂಟಿ ಭಾಗಕ್ಕೆ ಈ ಬೆಂಕಿಯು ವ್ಯಾಪಿಸಿತ್ತು. ಆ ಪ್ರದೇಶದಲ್ಲಿದ್ದ 27,000 ಜನರನ್ನು ಸ್ಥಳಾಂತರಿಸಲಾಗಿದೆ.
ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿರುವ ಪ್ರವಾಸಿ ತಾಣ ಹಾಹೋ ಫೋಕ್ ಗ್ರಾಮದ 8 ಕಿ.ಮೀ ಪ್ರದೇಶಕ್ಕೆ ಬೆಂಕಿ ಆವರಿಸಿಕೊಂಡಿದೆ. ಉಯಿಸಿಯಾಂಗ್‌ನಲ್ಲಿ ಕಾಡ್ಗಿಚ್ಚು ನಿಯಂತ್ರಣ ಕಾರ್ಯದಲ್ಲಿದ್ದ ಹೆಲಿಕಾಪ್ಟರೊಂದು ಪತನಗೊಂಡಿದೆ. ಪರಿಣಾಮ ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಸಾವನ್ನಪ್ಪಿದ್ದಾರೆ.
130 ಹೆಲಿಕಾಪ್ಟರ್, 4,650 ಅಗ್ನಿಶಾಮಕ ದಳ ಹಾಗೂ ಸೈನಿಕರ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.