ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಲಿವುಡ್ ನಟ ಮೋಹನ್ ಲಾಲ್ ಅವರು ನಟ ಮಮ್ಮುಟ್ಟಿಗಾಗಿ ಶಬರಿಮಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿರುವ ವಿಚಾರ ಇದೀಗ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಶಬರಿಮಲೆಯಲ್ಲಿ ಮಮ್ಮುಟ್ಟಿರವರ ಮೂಲ ಹೆಸರು ‘ಮುಹಮ್ಮದ್ ಕುಟ್ಟಿ’ ಹೆಸರಿನಲ್ಲಿ ಮೋಹನ್ ಲಾಲ್ ಪೂಜೆ ಮಾಡಿಸಿದ್ದಾರೆ ಎನ್ನಲಾದ ರಶೀದಿವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ಧಾರ್ಮಿಕ ನಂಬಿಕೆಗಳ ಜಿದ್ದಾಜಿದ್ದಿ ಶುರುವಾಗಿದೆ.
ಮಮ್ಮುಟ್ಟಿ ಮುಸ್ಲಿಂ ಆಗಿದ್ದು, ಅವರಿಗಾಗಿ ಮೋಹನ್‌ಲಾಲ್ ಪ್ರಾರ್ಥನೆ ಸಲ್ಲಿಸಿದ್ದರೆ ಅದು ತಪ್ಪು. ತಕ್ಷಣ ಕ್ಷಮೆಯಾಚಿಸಬೇಕೆಂದು ಅನೇಕರು ಆಗ್ರಹಿಸಿದ್ದಾರೆ
ಇದರ ನಡುವೆ ಕಾರ್ಯಕ್ರಮವೊಂದರಲ್ಲಿ ಮೋಹನ್ ಲಾಲ್ ಪ್ರತಿಕ್ರಿಯಿಸಿ, ಮಮ್ಮುಟ್ಟಿ ನನ್ನ ಸಹೋದರನಂತೆ, ಅವರಿಗಾಗಿ ಪ್ರಾರ್ಥನೆ ಮಾಡೋದ್ರರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.
ತಮ್ಮ ಮುಂಬರುವ ‘ಎಲ್ 2: ಎಂಪುರಾನ್’ ಚಿತ್ರದ ಪ್ರಚಾರದಲ್ಲಿರುವ ಮೋಹನ್ ಲಾಲ್, ಮಾರ್ಚ್ 18 ರಂದು ಪ್ರಾರ್ಥನೆ ಸಲ್ಲಿಸಲು ಶಬರಿಮಲೆಗೆ ಹೋಗಿದ್ದರು. ಸಂಧ್ಯಾ ಕಾಲದಲ್ಲಿ, ಅವರು ಮಮ್ಮುಟ್ಟಿ ಅವರ ಜನ್ಮ ಹೆಸರು ಮುಹಮ್ಮದ್ ಕುಟ್ಟಿ ಮತ್ತು ಅವರ ಜನ್ಮ ನಕ್ಷತ್ರ ‘ವಿಶಾಖಂ’ ಅನ್ನು ಹೇಳಿ ಪೂಜೆ ಸಲ್ಲಿಸಿದ್ದರು. ದೇವಸ್ವಂ ಕಚೇರಿಯ ಪೂಜಾ ರಶೀದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಒಂದು ವರ್ಗದ ಬಳಕೆದಾರರು ಇದನ್ನು ಕೋಮು ಸಾಮರಸ್ಯದ ಉದಾಹರಣೆ ಎಂದು ಶ್ಲಾಘಿಸಿದ್ದಾರೆ. ಆದಾಗ್ಯೂ, ಮತ್ತೊಂದು ವಿಭಾಗವು ಮಮ್ಮುಟ್ಟಿ ಮುಸ್ಲಿಂ ಮತ್ತು ಹಿಂದೂ ಪ್ರಾರ್ಥನೆಗಳು ಇಸ್ಲಾಮಿಕ್ ನಂಬಿಕೆಗೆ ಧಕ್ಕೆ ತಂದಂತೆ ಎಂದಿದ್ದರು. ‘ಮಧ್ಯಮಮ್’ ಪತ್ರಿಕೆಯ ಮಾಜಿ ಸಂಪಾದಕ ಓ ಅಬ್ದುಲ್ಲಾ ಈ ಬಗ್ಗೆ ಪ್ರತಿಕ್ರಿಯಿಸಿ, ಮಮ್ಮುಟ್ಟಿ ಅವರ ಪರವಾಗಿ ಪ್ರಾರ್ಥನೆ ಸಲ್ಲಿಸಿದ್ದರೆ ಮೋಹನ್‌ಲಾಲ್ ತಕ್ಷಣ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು. ಇಸ್ಲಾಮಿಕ್ ನಂಬಿಕೆಯನ್ನು ಅನುಸರಿಸುವ ಯಾರಾದರೂ ಅಲ್ಲಾಹನನ್ನು ಮಾತ್ರ ಪ್ರಾರ್ಥಿಸಬೇಕು ಎಂದು ಅವರು ಇಸ್ಲಾಮಿಕ್ ಕಾನೂನುಗಳನ್ನು ಉಲ್ಲೇಖಿಸಿದರು. ವೃತ್ತಿಪರ ಪೈಪೋಟಿಯ ಹೊರತಾಗಿಯೂ ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಉತ್ತಮ ಬಾಂದವ್ಯ ಹೊಂದಿದ್ದಾರೆ.
ಕೆಲದಿನಗಳ ಹಿಂದೆ ಮಮ್ಮುಟ್ಟಿ ಆರೋಗ್ಯ ಸರಿಯಿಲ್ಲ. ಅವರಿಗೆ ಕ್ಯಾನ್ಸರ್ ಇದೆ. ಹಾಗಾಗಿ ಸ್ನೇಹಿತನಿಗಾಗಿ ಮೋಹನ್ ಲಾಲ್ ಪೂಜೆ ಸಲ್ಲಿಸಿದ್ದಾರೆ ಎಂದೆಲ್ಲಾ ವದಂತಿ ಹಬ್ಬಿತ್ತು. ಆ ನಂತರ ನಟನ ಪಿ.ಆರ್ ಟೀಮ್ ಪ್ರತಿಕ್ರಿಯಿಸಿ, ಮಮ್ಮುಟ್ಟಿ ಆರೋಗ್ಯವಾಗಿದ್ದಾರೆ. ಇದು ಸುಳ್ಳು ಸುದ್ದಿ. ರಂಜಾನ್ ಉಪವಾಸದ ಕಾರಣದಿಂದ ಅವರು ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಹಬ್ಬ ಮುಗಿಯುತ್ತಿದ್ದಂತೆ ನಟ ಶೂಟಿಂಗ್‌ಗೆ ಪಾಲ್ಗೊಳ್ಳುತ್ತಾರೆ ಎಂದು ಸ್ಪಷ್ಟನೆ ನೀಡಿದ್ದರು.