Friday, March 31, 2023

Latest Posts

ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ: ಕೊಡಗಿನಲ್ಲಿ ಕಾಂಗ್ರೆಸ್ ಬಲ ಪ್ರದರ್ಶನ

ಹೊಸದಿಗಂತ ವರದಿ, ಮಡಿಕೇರಿ:

ರಾಜ್ಯದ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಲು ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಕೊಡಗು ಜಿಲ್ಲಾ ಕಾಂಗ್ರೆಸ್ ವೀರಾಜಪೇಟೆಯಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸುವ ಮೂಲಕ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

ವೀರಾಜಪೇಟೆಯ ಸೆರಿನಿಟಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಜನ ಸ್ಪಂದನ ಸಭೆಯಲ್ಲಿ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳುವ ಮೂಲಕ ಮುಂದಿನ ಚುನಾವಣೆಯನ್ನು ಎದುರಿಸಲು ನಾಯಕರುಗಳಿಗೆ ಶಕ್ತಿ ತುಂಬಿದರು.

ಇದೇ ಹಂತದಲ್ಲಿ ಜಿಲ್ಲಾ ಜೆಡಿಎಸ್‍ನ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಮೇರಿಯಂಡ ಸಂಕೇತ್ ಪೂವಯ್ಯ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್’ಗೆ ಮತ್ತಷ್ಟು ಬಲ ನೀಡುವ ವಿಶ್ವಾಸ ತುಂಬಿದರು.

ಮಹಿಳೆಯರಿಗೆ ಮಾಸಿಕ 2ಸಾವಿರ ರೂ.: ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ಕೇರಳದ ಶಾಸಕ ಹಾಗೂ ಎಐಸಿಸಿ ಕಾರ್ಯದರ್ಶಿ ರೋಸಿ ಜಾನ್ ಮಾತನಾಡಿ, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ್ನು ಜನತೆ ಆಶೀರ್ವದಿಸಿ ಅಧಿಕಾರಕ್ಕೆ ತಂದಲ್ಲಿ ಮಹಿಳೆಯರಿಗೆ ಮಾಸಿಕ 2 ಸಾವಿರ ರೂ. ಗೌರವ ಧನವನ್ನು ನೀಡಲಾಗುತ್ತದೆ. ಅಲ್ಲದೆ ವೀರಾಜಪೇಟೆ, ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಎಲ್ಲಾ ನಿವಾಸಿಗಳಿಗೆ ವಿದ್ಯುತ್ ಕಾರ್ಡ್ ನೀಡುವ ಮೂಲಕ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದರು.

ಕೊಡಗಿನಲ್ಲಿ ಆರೋಗ್ಯ ಸೌಲಭ್ಯಗಳು ಸಮರ್ಪಕವಾಗಿ ದೊರಕುತ್ತಿಲ್ಲ. ಸ್ಥಳೀಯರ ಬೇಡಿಕೆಯ ‘ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ’ ಮರೀಚಿಕೆಯಾಗಿದೆ ಎಂದು ಹೇಳಿದ ಅವರು, ಈ ಬಾರಿ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆಂದು ದೃಢವಾಗಿ ನುಡಿದರು.
ಹಾದಿ ತಪ್ಪಿಸುವ ಯತ್ನ: ಕಾಂಗ್ರೆಸ್ ಮುಖಂಡ ಹಾಗೂ ಪಕ್ಷದ ವೀಕ್ಷಕರಾದ ವಿನಯ್ ಕುಮಾರ್ ಸೊರಕೆ ಮಾತನಾಡಿ, ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಟಿಪ್ಪು ಮತ್ತು ಸಾವರ್ಕರ್ ನಡುವಿನ ಚುನಾವಣೆಯೆಂದು ಬಿಂಬಿಸುವ ಮೂಲಕ ಬಿಜೆಪಿ ಜನರ ಹಾದಿ ತಪ್ಪಿಸುವ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಟೀಕಿಸಿದರು.

ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್, ಕೊಡಗು ಕಾಂಗ್ರೆಸ್ ಉಸ್ತುವಾರಿ ಲಕ್ಷ್ಮಣ್, ಪ್ರಮುಖರಾದ ಚಂದ್ರಮೌಳಿ, ಎ.ಎಸ್.ಪೊನ್ನಣ್ಣ, ಮಂಥರ್ ಗೌಡ, ಮಾಜಿ ಎಂಎಲ್‍ಸಿಗಳಾದ ವೀಣಾ ಅಚ್ಚಯ್ಯ, ಸಿ.ಎಸ್. ಅರುಣ್ ಮಾಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕೆಪಿಸಿಸಿಯ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ ಪ್ರಸನ್ನ, ಕಾಂಗ್ರೆಸ್ ಮುಖಂಡರಾದ ಟಿ.ಪಿ.ರಮೇಶ್, ಪಿ.ಸಿ.ಹಸೈನಾರ್, ಮೀದೇರಿರ ನವೀನ್, ನಾಪೋಕ್ಲುವಿನ ಇಸ್ಮಾಯಿಲ್, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ರಂಜಿ ಪೂಣಚ್ಚ, ನೆರವಂಡ ಉಮೇಶ್, ಕೆ.ಬಿ.ಶಾಂತಪ್ಪ, ಸುರಯ್ಯಾ ಅಬ್ರಾರ್, ಬಾನಂಡ ಪ್ರಥ್ಯು, ಪೆಮ್ಮಂಡ ಪೊನ್ನಪ್ಪ, ತಾರಾ ಅಯ್ಯಮ್ಮ, ಕೊರಕುಟ್ಟೀರ ಸರ ಚಂಗಪ್ಪ ಮೊದಲಾದವರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!