ಹೊಸ ದಿಗಂತ ವರದಿ, ಚಿತ್ರದುರ್ಗ:
ರೈತರ ಹೊಲ, ಮನೆಗಳು, ದೇವಸ್ಥಾನಗಳು, ಶ್ರದ್ಧಾಕೇಂದ್ರಗಳನ್ನು ವಕ್ಫ್ ಆಸ್ತಿ ಎಂದು ತಿದ್ದುಪಡಿ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ವತಿಯಿಂದ ನ.೨೨ ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಕ್ಫ್ ಸಚಿವ ಜಮೀರ್ ಅಹಮದ್ ಬಿಜಾಪುರದಲ್ಲಿ ಸಭೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶದ ಮೇರೆಗೆ ೧೫ ದಿನಗಳೊಳಗಾಗಿ ವಕ್ಫ್ ಹಸರಿರುವ ಆಸ್ತಿಗಳನ್ನು ವಕ್ಫ್‌ಗೆ ಸೇರಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಕುರಿತು ಅಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ನಡಾವಳಿಯಲ್ಲಿ ದಾಖಲಿಸಲಾಗಿದೆ. ಇದನ್ನು ವಿರೋಧಿಸಿ ಬಸವನಗೌಡ ಯತ್ನಾಳ್ ಪ್ರತಿಭಟನೆ ನಡೆಸಿದರು ಎಂದರು.
ಬಳಿಕ ಬಿಜೆಪಿ ನನ್ನ ನೇತೃತ್ವದಲ್ಲಿ ಸತ್ಯಶೋಧನ ಸಮಿತಿ ರಚಿಸಿತು. ಸಮಿತಿಯು ಬಿಜಾಪುರದ ವಿವಿಧೆಡೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ತಯಾರಿಸಿತು. ಅದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಲ್ಲಿಸಲಾಗಿದೆ. ಅದರಂತೆ ಕೇಂದ್ರದಿಂದ ಆಗಮಿಸಿದ್ದ ಸಮಿತಿಯ ಅಧ್ಯಕ್ಷರಿಗೂ ನೀಡಲಾಗಿದ್ದು, ಲೋಕಸಭೆಗೆ ಸಲ್ಲಿಸಲಿದೆ. ರೈತರ ಜಮೀನುಗಳನ್ನು ವಾಪಾಸ್ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಪಹಣಿಗಳಲ್ಲಿ ವಕ್ಫ್ ಹೆಸರನ್ನು ತೆಗೆದುಹಾಕಿಲ್ಲ. ಹಾಗಾಗಿ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಪ್ರವಾಸ ಮಾಡಿ ವಕ್ಫ್ ಸಮಸ್ಯೆ ಇರುವ ಸ್ಥಳಗಳಿಗೆ ಭೆಟಿ ನೀಡಿ ಮಾಹಿತಿ ಸಂಗ್ರಹಿಸಲಾಗುವುದು. ಅದಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಅದರಂತೆ ಆ ತಂಡಗಳು ರಾಜ್ಯಾದ್ಯಂತ ಪ್ರವಾಸ ನಡೆಸಲಿವೆ. ಅಲ್ಲದೇ ವಕ್ಫ್ ಆಸ್ತಿ ಕಬಳಿಕೆ ಕುರಿತು ಅನ್ವರ್ ಮಣಿಪ್ಪಾಡಿ ವರದಿ ತಯಾರಿಸಿದ್ದರು. ಅದು ಬಿಜೆಪಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ನಂತರ ಬಂದ ಸಿದ್ದರಾಮಯ್ಯ ಸರ್ಕಾರದ ಆ ಬಗ್ಗೆ ಗಮನ ನೀಡಿಲ್ಲ. ನಿಜವಾಗಿಯೂ ಸಿದ್ದರಾಮಯ್ಯ ಅವರಿಗೆ ಬದ್ಧತೆ ಇದ್ದಲ್ಲಿ ಅನ್ವರ್ ಮಣಿಪ್ಪಾಡಿ ವರದಿ ಪರಿಶೀಲಿಸಲಿ. ವಕ್ಫ್ ಆಸ್ತಿ ಕಬಳಿಸಿರುವವರಿಂದ ೨೯ ಸಾವಿರ ಎಕರೆ ಆಸ್ತಿಯನ್ನು ವಶಪಡಿಸಿಕೊಳ್ಳಲಿ ಎಂದು ಸಲಹೆ ಮಾಡಿದರು.
ರಾಜ್ಯದಲ್ಲಿ ೨೨ ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಅನೇಕ ರೈತರಿಗೆ ಅನ್ಯಾಯವಾಗಲಿದೆ. ಉಳ್ಳವರಿಂದ ಕಾರ್ಡ್ ವಾಪಾಸ್ ಪಡೆಯಲು ನಮ್ಮ ಅಭ್ಯಂತರವಿಲ್ಲ. ಆದರೆ ಬಡವರ ಹೊಟ್ಟೆ ಮೇಲೆ ಹೊಡೆಯುವುದು ಸರಿಯಲ್ಲ. ಇದರಿಂದ ಬಡವರ ಕಣ್ಣೀರಿನ ಶಾಪ ರಾಜ್ಯ ಸರ್ಕಾರಕ್ಕೆ ತಟ್ಟಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ವಕ್ಫ್ ಕ್ರಮವನ್ನು ಖಂಡಿಸಿ ನ.೨೨ ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು. ವಕ್ಫ್ ಅಕ್ರಮ ಕುರಿತು ಮಾಹಿತಿ ಸಂಗ್ರಹಿಸಲು ಮೂರು ತಂಡಗಳನ್ನು ರಚಿಸಲಾಗಿದ್ದು, ಜಿಲ್ಲೆಗೂ ಒಂದು ತಂಡ ಆಗಮಿಸಲಿದೆ. ಸಮಸ್ಯಾತ್ಮಕ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದೆ. ಕಾಂಗ್ರೆಸ್ ಪ್ರಭಾವಿಗಳು ವಕ್ಫ್ ಆಸ್ತಿಯನ್ನು ಕಬಳಿಸಿದ್ದು, ರಾಜ್ಯ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಮುರುಳಿ, ಸಂಪತ್‌ಕುಮಾರ್, ಮಲ್ಲಿಕಾರ್ಜುನ್ ಸೇರಿದಂತೆ ಇತರರು ಹಾಜರಿದ್ದರು