ಹೊಸದಿಗಂತ ಡಿಜಿಟಲ್ ಡೆಸ್ಕ್:
2023ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಸುದೀರ್ಘ ಬ್ರೇಕ್ ಪಡೆದಿದ್ದ ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರಿತ್ ಬುಮ್ರಾ, ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಒನ್ ಡೇ ಪಂದ್ಯದ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಸುಮಾರು 968 ದಿನಗಳ ಕಾಲ ಏಕದಿನ ಕ್ರಿಕೆಟ್‌ನಿಂದ ದೂರವಿದ್ದರೂ, ತಮ್ಮ ಹರಿತವಾದ ಬೌಲಿಂಗ್ ದಾಳಿಯಿಂದ ಆತಿಥೇಯ ಇಂಗ್ಲೆಂಡ್ ಬ್ಯಾಟರ್‌ಗಳನ್ನು ನಡುಗಿಸಿದರು. ಎರಡನೇ ಸ್ಪೆಲ್‌ನ ಮೊದಲ ಎಸೆತದಲ್ಲೇ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ವಿಕೆಟ್ ಪಡೆದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ತಾವೇ ಬಾಸ್ ಎಂಬುದನ್ನು ಸಾಬೀತುಪಡಿಸಿದರು.
ಇಂಗ್ಲೆಂಡ್ ನೆಲದಲ್ಲಿ ನಂಬರ್ 1 ಬೌಲರ್!
ಹ್ಯಾರಿ ಬ್ರೂಕ್ ಅವರ ವಿಕೆಟ್ ಉರುಳಿಸುತ್ತಿದ್ದಂತೆ ಬುಮ್ರಾ ಮಹತ್ತರ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡರು. ಇಂಗ್ಲೆಂಡ್ ಮಣ್ಣಿನಲ್ಲಿ ಅತಿ ಹೆಚ್ಚು ಏಕದಿನ ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾಗಿದ್ದಾರೆ. ಈ ಮೂಲಕ ಅವರು ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಹಿಂದಿಕ್ಕಿದ್ದಾರೆ. ಸದ್ಯ ಬುಮ್ರಾ ಇಂಗ್ಲೆಂಡ್‌ನಲ್ಲಿ 31 ಏಕದಿನ ವಿಕೆಟ್‌ಗಳನ್ನು ಹೊಂದಿದ್ದಾರೆ.
ಇಂಗ್ಲೆಂಡ್‌ನಲ್ಲಿ ಹೆಚ್ಚು ODI ವಿಕೆಟ್ ಪಡೆದ ಭಾರತೀಯರು:
- ಜಸ್ಪ್ರಿತ್ ಬುಮ್ರಾ: 31 ವಿಕೆಟ್
- ರವೀಂದ್ರ ಜಡೇಜಾ: 30 ವಿಕೆಟ್
- ಭುವನೇಶ್ವರ್ ಕುಮಾರ್: 28 ವಿಕೆಟ್
150 ವಿಕೆಟ್‌ಗಳ ಅದ್ಭುತ ಮೈಲಿಗಲ್ಲು
ಇದೇ ಪಂದ್ಯದಲ್ಲಿ ಬುಮ್ರಾ ತಮ್ಮ ಏಕದಿನ ಕ್ರಿಕೆಟ್ ಜೀವನದ 150ನೇ ವಿಕೆಟ್ ಸಾಧನೆ ಮಾಡಿದರು. ಕೇವಲ 90 ಪಂದ್ಯಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ, ಅತಿ ವೇಗವಾಗಿ 150 ಏಕದಿನ ವಿಕೆಟ್ ಕಬಳಿಸಿದ ಭಾರತದ 3ನೇ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.



