ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ಎಸ್‌ಐಟಿ ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾದ ಏಳು ಅಸ್ಥಿಪಂಜರಗಳ ಪೈಕಿ ಮೂರರ ಎಫ್‌ಎಸ್‌ಎಲ್ ವರದಿ ಹೊರಬಿದ್ದಿದ್ದು, ಈ ಮೂರು ವ್ಯಕ್ತಿಗಳನ್ನು ಕುಟುಂಬದ ಡಿಎನ್‌ಎ ಮೂಲಕ ಗುರುತು ದೃಢಪಡಿಸಲಾಗಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮದ ನಿವಾಸಿ ಯು.ಬಿ. ಅಯ್ಯಪ್ಪ (70), ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ ಆದಿಶೇಷ ನಾರಾಯಣ (27), ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿಯ ಕೃಷ್ಣಪ್ಪ (85) ಎಂಬವರ ಅಸ್ಥಿಪಂಜರ ಡಿಎನ್‌ಎ ಪರೀಕ್ಷೆ ಖಚಿತಪಡಿಸಿದೆ.
ಕೊಡಗು ಜಿಲ್ಲೆಯ ಯು.ಬಿ. ಅಯ್ಯಪ್ಪ, 2017ರ ಜೂ.25ರಂದು ಮೈಸೂರು ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದವರು ವಾಪಸ್ ಬಾರದೆ ನಾಪತ್ತೆಯಾಗಿದ್ದ ಬಗ್ಗೆ ಕುಟ್ಟ ವೃತ್ತದ ಶ್ರೀಮಂಗಳ ಪೊಲೀಸ್ ಠಾಣೆಯಲ್ಲಿ ಮನೆಮಂದಿ ದೂರು ದಾಖಲಿಸಿದ್ದರು. ತುಮಕೂರು ಜಿಲ್ಲೆಯ ಆದಿಶೇಷ ನಾರಾಯಣ, ಬೆಂಗಳೂರಿನ ಬಾರ್‌ವೊಂದರಲ್ಲಿ ಕೆಲಸಕ್ಕೆ ಹೋಗಿದ್ದ ಬಳಿಕ 2013ರ ಅ.2ರಂದು ವಾಪಸ್ ಮನೆಗೆ ಬಂದು ಮೊಬೈಲ್ ಇಟ್ಟು ನಾಪತ್ತೆಯಾಗಿದ್ದ. ಈತ ಪದೆ ಪದೆ ಮನೆಯಿಂದ ಹೋಗುತ್ತಿದ್ದ ಕಾರಣ ವಾಪಸ್ ಬರುತ್ತಾನೆಂದು ನಾಪತ್ತೆ ಪ್ರಕರಣ ಕುಟುಂಬದವರು ನೀಡಿಲ್ಲ. ಇನ್ನು ಕೋಲಾರ ಜಿಲ್ಲೆಯ ಕೃಷ್ಣಪ್ಪ ವಯಸ್ಸಾದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇದ್ದು 2024ರ ಅ.22ರಂದು ಏಕಾಏಕಿ ಮನೆಯಿಂದ ಹೊರ ಹೋದವರು ವಾಪಸ್ ಮನೆಗೆ ಬಾರದೆ ಇದ್ದ ಕಾರಣ ಕುಟುಂಬದವರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಈ ಮೂರು ಕುಟುಂಬದವರು ಎಸ್‌ಐಟಿಗೆ ಮನವಿ ಮಾಡಿದರೆ ಅಸ್ಥಿಪಂಜರವನ್ನು ಕುಟುಂಬಕ್ಕೆ ಪಡೆಯಲು ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಜು.೧೫ ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಕೆಯಲ್ಲಿ ಈ ಮೂವರ ಡಿಎನ್‌ಎ ದೃಢಪಟ್ಟ ಬಗ್ಗೆ ವರದಿ ನೀಡಿದೆ.
ಇದನ್ನೂ ಓದಿ:
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡೆಯಲ್ಲಿ ಸೌಜನ್ಯಳ ಮಾವ ವಿಠಲ ಗೌಡ ತೋರಿಸಿದ ಜಾಗದಲ್ಲಿ ಎಸ್‌ಐಟಿ ಅಧಿಕಾರಿಗಳು 17-09-2025 ಮತ್ತು 18-09-2025 ರಂದು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಒಟ್ಟು ಏಳು ಅಸ್ಥಿಪಂಜರಗಳನ್ನು ಪತ್ತೆ ಹಚ್ಚಿ ಎಫ್‌ಎಲ್‌ಎಲ್‌ಗೆ ಕಳುಹಿಸಿದ್ದರು. ಅಸ್ಥಿಪಂಜರ ಪತ್ತೆಯಾದ ಜಾಗದಲ್ಲಿ ಕೆಲವೊಂದು ಐಡಿ ಕಾರ್ಡ್‌ಗಳು ಕೂಡ ಪತ್ತೆಯಾಗಿತ್ತು. ಅದರ ಆಧಾರದಲ್ಲಿ ಕುಟುಂಬದವನ್ನು ಹುಡುಕಾಟ ನಡೆಸಿ ಕುಟುಂಬದವರ ಡಿಎನ್‌ಎ ಪರೀಕ್ಷೆಯನ್ನು ಬೆಳ್ತಂಗಡಿ ನ್ಯಾಯಾಲಯದಲ್ಲಿ ನಡೆಸಿ ಎಫ್‌ಎಸ್‌ಎಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈಗ ಈ ಮೂವರ ಕುಟುಂಬದ ಡಿಎನ್‌ಎ ಅಸ್ಥಿಪಂಜರಕ್ಕೆ ತಾಳೆಯಾಗಿರುವುದು ವರದಿ ಖಚಿತಪಡಿಸಿದೆ.



