ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಡಬಲ್ ಎಂಜಿನ್ ಸರಕಾರ ಇದ್ದ ಕಾರಣ ಕರ್ನಾಟಕದ ಮೂಲಸೌಕರ್ಯ ವೃದ್ಧಿಗೆ ಗರಿಷ್ಠ ಹಣ ಲಭಿಸಿದೆ ಎಂದು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಮಲ್ಲೇಶ್ವರದ ಮಾಧ್ಯಮ ಕೇಂದ್ರ “ಗಿರಿಜಾರಾಮ ದೈವಜ್ಞ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈಲ್ವೆ, ಹೆದ್ದಾರಿ ರಸ್ತೆಗಳ ಸುಧಾರಣೆ, ವಿಮಾನನಿಲ್ದಾಣ ಅಭಿವೃದ್ಧಿ, ಮೂಲಸೌಕರ್ಯ ವೃದ್ಧಿ, ರಕ್ಷಣೆ ಮತ್ತು ಇತರ ಕ್ಷೇತ್ರಗಳಲ್ಲಿ ಗರಿಷ್ಠ ಅನುದಾನ ಕರ್ನಾಟಕಕ್ಕೆ ಲಭಿಸಿದೆ ಎಂದು ವಿವರಿಸಿದರು.
ಬೆಂಗಳೂರು- ಮೈಸೂರು ಎಕ್ಸ್‍ಪ್ರೆಸ್ ಹೈವೇ ನಿರ್ಮಾಣಕ್ಕೆ 8 ಸಾವಿರ ಕೋಟಿಗೂ ಹೆಚ್ಚು ಹಣ ಹೂಡಿದ್ದು, ಮೈಸೂರು- ಕುಶಾಲನಗರ ರಸ್ತೆಗೆ 4 ಸಾವಿರ ಕೋಟಿಗೂ ಹೆಚ್ಚು ಹಣ ಹೂಡಲಾಗುತ್ತಿದೆ. ಕರ್ನಾಟಕದಲ್ಲಿ ಹೈವೇಗಳ ಅಭಿವೃದ್ಧಿಗೆ 1 ಲಕ್ಷ ಕೋಟಿ ಹಣ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರೈಲ್ವೆಯಡಿ 2009- 14ರ ನಡುವಿನ ಅವಧಿಯಲ್ಲಿ ಯುಪಿಎ ಸರಕಾರವು 835 ಕೋಟಿ ರೂಪಾಯಿಯನ್ನು ನೀಡಿತ್ತು. ಆದರೆ, ಮೋದಿಯವರ ಆಡಳಿತಾವಧಿಯಲ್ಲಿ 2015-23ರ ನಡುವಿನ ಅವಧಿಯಲ್ಲಿ (2023-24ರ ಬಜೆಟ್ ಮೊತ್ತ ಸೇರಿ) 7,561 ಕೋಟಿ (9 ಪಟ್ಟು ಹೆಚ್ಚು) ಖರ್ಚು ಮಾಡಲಾಗುತ್ತಿದೆ. ವಿಶ್ವದ ಅತ್ಯಂತ ಉದ್ದದ ರೈಲ್ವೆ ಪ್ಲಾಟ್‍ಫಾರಂ ಕರ್ನಾಟಕದಲ್ಲಿದೆ. ಅದನ್ನು ಪ್ರಧಾನಿಯವರು ಉದ್ಘಾಟಿಸಿದ್ದು, 1507 ಮೀಟರ್ ಉದ್ದದ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ಪ್ಲಾಟ್‍ಫಾರಂ ಇದಾಗಿದೆ. ಹವಾನಿಯಂತ್ರಿತ ಸರ್ ಎಂ.ವಿಶ್ವೇಶ್ವರ್ಯ್ಯ ರೈಲ್ವೆ ಸ್ಟೇಷನ್ ಅನ್ನು ಬೈಯಪ್ಪನಹಳ್ಳಿಯಲ್ಲಿ ಪ್ರಧಾನಿ ಉದ್ಘಾಟಿಸಿದ್ದಾರೆ. ಕೊಂಕಣ ರೈಲ್ವೆಯ 740 ಕಿಮೀ ಉದ್ದದ ಶೇ 100 ವಿದ್ಯುದೀಕರಣ ವ್ಯವಸ್ಥೆಯನ್ನು ಪ್ರಧಾನಿಯವರು ಲೋಕಾರ್ಪಣೆ ಮಾಡಿದ್ದಾರೆ ಎಂದು ತಿಳಿಸಿದರು.
ಇದು ರೈಲ್ವೆಗೆ ಕೇಂದ್ರ ಸರಕಾರ ನೀಡಿದ ಆದ್ಯತೆಯ ಪ್ರತಿಬಿಂಬ ಎಂದರು. ವೈಟ್‍ಫೀಲ್ಡ್- ಕೆ.ಆರ್.ಪುರ ನಡುವಿನ 4250 ಕೋಟಿ ವೆಚ್ಚದ ಮೆಟ್ರೊ ಮಾರ್ಗ ಉದ್ಘಾಟನೆ ಆಗಿದೆ ಎಂದು ಮಾಹಿತಿ ಕೊಟ್ಟರು.
ಶಿವಮೊಗ್ಗ ವಿಮಾನನಿಲ್ದಾಣ ಉದ್ಘಾಟನೆ ಆಗಿದೆ. 3600 ಕೋಟಿ ಹೂಡಲಾಗಿದೆ. 5 ಸಾವಿರ ಕೋಟಿ ವೆಚ್ಚದ ಬೆಂಗಳೂರು ವಿಮಾನನಿಲ್ದಾಣದ 2ನೇ ಟರ್ಮಿನಲ್ ಉದ್ಘಾಟನೆ ಮಾಡಲಾಗಿದೆ. ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ 520 ಕೋಟಿ ವೆಚ್ಚ ಮಾಡಲಾಗಿದೆ. ಜಯದೇವ ಆಸ್ಪತ್ರೆ ಅಭಿವೃದ್ಧಿಗೆ 250 ಕೋಟಿ ಖರ್ಚು ಮಾಡಿದ್ದೇವೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಯೋಜನೆಯಡಿ ತುಮಕೂರಿನ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಡೆದಿದೆ ಎಂದರು. ಮಂಗಳೂರು ಬಂದರನ್ನು 3800 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ವಿವರಿಸಿದರು.
ತುಮಕೂರಿನಲ್ಲಿ ಹೆಲಿಕಾಪ್ಟರ್ ಉತ್ಪಾದನಾ ಘಟಕ ಸ್ಥಾಪನೆ ಕುರಿತು ಅವರು ತಿಳಿಸಿದರು. ಇದು ರಕ್ಷಣಾ ಕ್ಷೇತ್ರದ ಆತ್ಮನಿರ್ಭರತೆಗೆ ಪೂರಕ ಎಂದು ನುಡಿದರು.
ದೆಹಲಿಯಲ್ಲಿ ಅಭಿವೃದ್ಧಿಪರ ಬಿಜೆಪಿ ಸರಕಾರ ಇದೆ. ಎಲ್ಲ ರಾಜ್ಯಗಳ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳುವ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಸರಕಾರ ದೆಹಲಿಯದು. ಕರ್ನಾಟಕದ ಅಭಿವೃದ್ಧಿ ರಥದ ಕುರಿತು ಪ್ರಧಾನಿ ಮೋದಿಯವರು ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಉಪಸ್ಥಿತರಿದ್ದರು.