ಸ್ವಾತಂತ್ರ್ಯ ಯೋಧರ ಸ್ಮರಣೆ ನಿರಂತರವಾಗಲಿ: ಸು. ರಾಮಣ್ಣ

ಹೊಸದಿಗಂತ ವರದಿ, ಹುಬ್ಬಳ್ಳಿ:
ಭಾರತೀಯ ಜೀವನ‌ ಶೈಲಿ ನಮ್ಮಲ್ಲಿ ಅಡಕವಾದಾಗ ಮಾತ್ರ ನಮ್ಮ‌ ಹಿರಿಯರು ಹೇಳಿಕೊಟ್ಟ ಮೌಲ್ಯಗಳು ಉಳಿಯುತ್ತವೆ. ಭಾರತದ ರಕ್ಷಣೆ ಹಾಗೂ ಏಳಿಗೆಯಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಠ ಪ್ರಚಾರಕ ಸು. ರಾಮಣ್ಣ ಹೇಳಿದರು.
ನಗರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಕಾರ್ಯಾಲಯದಲ್ಲಿ ಹರ್ ಘರ್ ತಿರಂಗ ಅಭಿಯಾನದ ಭಾಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬರಬೇಕಾದರೆ ಅಸಂಖ್ಯ ಹೋರಾಟಗಾರರ ಬಲಿದಾನವಾಯಿತು. ತಾಯಿ ಭಾರತಾಂಬೆಯ ಮುಕ್ತಿಗೆ ಲಕ್ಷಾಂತರ ಜನ ಪ್ರಾಣಾರ್ಪಣೆಗೈದರು. ಅವರ ಸ್ಮರಣೆ ನಿರಂತರವಾಗಬೇಕು. ಅವರ ತ್ಯಾಗ, ಬಲಿದಾನಗಳಿಗೆ ಗೌರವ ಸೂಚಿಸಲು ಇಂದು ನಾವು ದೇಶಕ್ಕೋಸ್ಕರ ಬದುಕಬೇಕು ಎಂದರು. ಪ್ರಸ್ತುತ ದಿನಗಳಲ್ಲಿ ನಮ್ಮ ಮಾತೃಭಾಷೆ ಉಳಿಸುವುದು ಸಹ ಸ್ವರಾಜ್ಯವನ್ನು ಉಳಿಸುವ ಭಾಗವಾಗಿದೆ. ಆಂಗ್ಲ ಭಾಷೆಯ ವ್ಯಾಮೋಹ ಕಡಿಮೆಯಾಗಬೇಕು.  ದೇಶ, ಸಂಸ್ಕೃತಿಯ ರಕ್ಷಣೆಯಾಗಬೇಕಾದರೆ ಮೊದಲು ನಮ್ಮ ಮಾತೃ ಭಾಷೆ ಉಳಿಯಬೇಕು ಎಂದು ಹೇಳಿದರು.
ಕಿಮ್ಸ್ ನ ವೈದ್ಯಾಧಿಕಾರಿ ಡಾ. ಕ್ರಾಂತಿಕಿರಣ ಮಾತನಾಡಿ,  ಸ್ವಾತಂತ್ರ್ಯ ಪಡೆಯುವಲ್ಲಿ ನಮ್ಮ ಹೋರಾಟ ಹಾಗೂ ಅದರ ಇತಿಹಾಸ ಅನನ್ಯವಾಗಿದೆ.‌ ಆದರೆ ಪಠ್ಯಪುಸ್ತಕಗಳಲ್ಲಿ ಇದರ ಕುರಿತು ತಿರುಚಿ ಬರೆಯಲಾಗಿದೆ. ಸ್ವಾತಂತ್ರ್ಯ ಹೋರಾಟದ ಇತಿಹಾಸ ಸರಿಯಾಗಿ ಬೋಧನೆಯಾಗಬೇಕು. ಸುಮಾರು 20 ಲಕ್ಷ ಜನ ದೇಶದ ಸ್ವರಾಜ್ಯಕ್ಕೆ ಹೋರಾಡಿದ್ದಾರೆ. ಇನ್ನೂ ಅಸಂಖ್ಯ ಅಜ್ಞಾತ ಹೋರಾಟಗಾರರ ಪರಿಚಯ ಈಗಿನ ಯುವಪೀಳಿಗೆಗೆ ಆಗಬೇಕು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!