ಹೊಸ ಯುಗದ ಆರಂಭ, ಹೊಸ ಭರವಸೆಗಳೊಂದಿಗೆ ನಿಮ್ಮೆಲ್ಲರ ಜೀವನ ಸಿಹಿಯಾಗಲಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಹಿಂದೂಗಳಿಗೆ ಅತ್ಯಂತ ಪ್ರಮುಖ ದಿನ, ಹೊಸವರುಷದ ಮೊದಲ ದಿನ, ಇಂದು ಬೇವು ಬೆಲ್ಲ ತಿಂದು ಜೀವನದಲ್ಲಿ ಬರುವ ಕಷ್ಟ ಸುಖಗಳನ್ನು ಸಮನಾಗಿ ಹಂಚಿಕೊಳ್ಳಬೇಕು ಎನ್ನುವ ಸಾರವನ್ನು ಹೇಳಲಾಗುತ್ತದೆ.

ಯುಗಾದಿಯನ್ನು ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಹಿಂದೂ ಚಂದ್ರಮಾನ ಕ್ಯಾಲೆಂಡರ್‌ ಪ್ರಕಾರ ಇಂದಿನಿಂದ ಹೊರ ವರ್ಷದ ಆರಂಭವಾಗಲಿದೆ.ಯುಗಾದಿಯು ಸಂತೋಷ, ಭರವಸೆ ಮತ್ತು ಹೊಸ ಆರಂಭದ ಹಬ್ಬವಾಗಿದ್ದು, ವಿವಿಧ ಆಚರಣೆಗಳು ಮತ್ತು ಸಂಪ್ರದಾಯಗಳೊಂದಿಗೆ ಆಚರಿಸಲಾಗುತ್ತದೆ.

ಯುಗಾದಿ ನಿನ್ನೆ, ಮೊನ್ನೆಯಿಂದ ಆಚರಿಸಿಕೊಂಡು ಬಂದ ಹಬ್ಬವಲ್ಲ. ಬದಲಾಗಿ ಶತ ಶತಮಾನಗಳಿಂದಲೂ ಆಚರಿಸಿಕೊಂಡು ಬಂದ ಹಬ್ಬವಾಗಿದೆ. ಅದರ ಮೂಲವು ಶಾತವಾಹನ ರಾಜವಂಶಕ್ಕೂ ಹಿಂದಿನದು ಎನ್ನುವ ನಂಬಿಕೆಯಿದೆ. ಈ ರಾಜ ವಂಶವು ಇಂದಿನ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದ ಭಾಗಗಳನ್ನು ಕ್ರಿ.ಪೂ ಸುಮಾರು 230 ರಿಂದ ಕ್ರಿ.ಶ 220 ರವರೆಗೆ ಆಳಿದ ಸಾಮ್ರಾಜ್ಯವಾಗಿದೆ. ಈ ಕಾಲದ ಪ್ರಾಚೀನ ಗ್ರಂಥಗಳು ಮತ್ತು ಶಾಸನಗಳಲ್ಲಿ ಹಬ್ಬದ ಉಲ್ಲೇಖವನ್ನು ಕಾಣಬಹುದು.

ಯುಗಾದಿಯು ಕೇವಲ ಹಬ್ಬದ ದಿನವಲ್ಲ. ಬದಲಾಗಿ, ಇದೊಂದು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ದಿನವಾಗಿದೆ. ಈ ಹಬ್ಬವನ್ನು ಆಚರಿಸುವ ಮುನ್ನವೇ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು, ಹೊಸ ಬಟ್ಟೆಗಳನ್ನು ಧರಿಸಲು ಮತ್ತು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಅಲಂಕರಿಸಲು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿಯನ್ನು ಹೊಸ ವರ್ಷದ ದಿನವಾಗಿ ಆಚರಿಸಲಾಗುತ್ತದೆ. ಈ ಹಬ್ಬವು ಹೊಸ ಯುಗದ ಆರಂಭವನ್ನು ಸಂಕೇತಿಸುತ್ತದೆ, ಏಕೆಂದರೆ ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನು ಈ ಮಂಗಳಕರ ದಿನದಂದು ಸೃಷ್ಟಿ ಪ್ರಕ್ರಿಯೆಯನ್ನು ಪ್ರಾರಂಭಿಸಿದನು ಎಂಬುದು ಈ ಹಬ್ಬಕ್ಕೆ ಸಂಬಂಧಿಸಿದ ಪೌರಾಣಿಕ ನಂಬಿಕೆಯಾಗಿದೆ.

ಈ ವರ್ಷದಲ್ಲಿ ಎಲ್ಲರ ಜೀವನದಲ್ಲಿಯೂ ನೆಮ್ಮದಿ, ಆರೋಗ್ಯ, ಆಯಸ್ಸು, ಸಂತೋಷ, ತೃಪ್ತಿ, ಹೊಸತನ, ಹೊಸ ಅವಕಾಶಗಳು, ಹೊಸ ಭರವಸೆ ನಿಮ್ಮನ್ನು ಹುಡುಕಿಕೊಂಡು ಬರಲಿ, ಸರ್ವರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!