ಹೊಸದಿಗಂತ ಡಿಜಿಟಲ್ ಡೆಸ್ಕ್:
500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಮತ್ತು 100 ಯೂನಿಟ್ ಉಚಿತ ವಿದ್ಯುತ್ ಇದೆಲ್ಲಾ ರಾಜಸ್ಥಾನ ಸರ್ಕಾರದ ಚುನಾವಣಾ ಗಿಮಿಕ್ ಎಂದು ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ವಾಗ್ದಾಳಿ ನಡೆಸಿದರು. ಈ ಹಿಂದೆ ಅಧಿಕಾರದಲ್ಲಿದ್ದಾಗ ಇದೆಲ್ಲವನ್ನು ಏಕೆ ಮಾಡಲಿಲ್ಲ, ಚುನಾವಣೆಗೂ ಮುನ್ನ ಜನರ ಬೇಕು ಬೇಡಗಳಿಗೆ ಮನ್ನಣೆ ನೀಡಿದ್ದೀರಾ ಎಂದು ಪ್ರಶ್ನಿಸಿದರು. ಶುಕ್ರವಾರ ತಮ್ಮ ಟ್ವಿಟರ್ ಖಾತೆಯ ಮೂಲಕ ಕಾಂಗ್ರೆಸ್ ನೇತೃತ್ವದ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜಸ್ಥಾನದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ಕೇವಲ 500 ರೂ.ಗೆ ಅಡುಗೆ ಅನಿಲ ಹಾಗೂ 100 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದೆ. ಆದರೆ, ಏರುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ರಚನೆಯ ಆರಂಭದಲ್ಲಿ ಐದು ವರ್ಷಗಳ ಹಿಂದೆಯೇ ಈ ಕೆಲಸ ಮಾಡಬೇಕಿತ್ತು.
ಜನಕಲ್ಯಾಣ ಕಾರ್ಯಕ್ರಮಗಳಲ್ಲಿ ವಿಫಲವಾಗಿರುವ ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳ ಕಾಂಗ್ರೆಸ್ ಸರ್ಕಾರಗಳು, ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಮತ್ತು ತೆಲಂಗಾಣದ ಬಿಆರ್‌ಎಸ್ ಸರ್ಕಾರವು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ದಾರಿ ತಪ್ಪಿಸುವ ಜಾಹೀರಾತುಗಳನ್ನು ಬಳಸುತ್ತಿವೆ ಎಂದರು.
ʻಹಣದುಬ್ಬರ, ಬಡತನ, ನಿರುದ್ಯೋಗ, ಹಿಂದುಳಿದಿರುವಿಕೆ ಇತ್ಯಾದಿಗಳನ್ನು ತೊಲಗಿಸಿ ರಾಜ್ಯದ ಅಪೇಕ್ಷಿತ ಅಭಿವೃದ್ಧಿಯನ್ನು ಸಾಧಿಸಲು ಮೇಲಿನ ನಾಲ್ಕು ರಾಜ್ಯಗಳ ಜನರು ಈ ಪಕ್ಷಗಳ ಸರ್ಕಾರಗಳಿಗೆ ಅವಕಾಶವನ್ನು ಒದಗಿಸಿದ್ದಾರೆ. ಆದರೆ ಈ ಪಕ್ಷಗಳ ಸರಕಾರಗಳು ಜನರ ಹಿತವನ್ನು ಕಡೆಗಣಿಸಿ ಜನರಿಗೆ ದ್ರೋಹ ಬಗೆದಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.