ಹೊಸದಿಗಂತ ವರದಿ, ವಿಜಯಪುರ:
ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕುರಿತು ಏಕವಚನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ, ಕೂಡಲೇ ಎಂ.ಬಿ. ಪಾಟೀಲ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಎಚ್ಚರಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಎಂ.ಬಿ. ಪಾಟೀಲರ ಹೆಸರು ಹೇಳದೆ ಪರೋಕ್ಷವಾಗಿ ಮಾತನಾಡಿ, ಸಚಿವ ಗೋವಿಂದ ಕಾರಜೋಳ ಬಗ್ಗೆ ಕೆಟ್ಟ ಪದಗಳನ್ನು ಬಳಸಿ ಮಾತನಾಡಿರುವುದು ದಲಿತ ಸಮುದಾಯಕ್ಕೆ ನೋವುಂಟು ಮಾಡಿದಂತಾಗಿದೆ ಎಂದರು.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲಿ ಎಂ.ಬಿ. ಪಾಟೀಲ ಐದು ವರ್ಷ ಜಲ ಸಂಪನ್ಮೂಲ ಸಚಿವರಾಗಿದ್ದರು. ಆಗ ಮೇಕೆದಾಟು ಯೋಜನೆ ಏಕೆ ಮಾಡಲಿಲ್ಲ. ಈ ಬಗ್ಗೆ ಗೋವಿಂದ ಕಾರಜೋಳ ಅವರು ಮೇಕೆದಾಟು ಯೋಜನೆಯ ಪ್ರತಿ ಸೂಕ್ಷ್ಮತೆಯ ಸತ್ಯವನ್ಮು ತಿಳಿಸುತ್ತಿದ್ದು, ಇದಕ್ಕಾಗಿ ಮಾಜಿ ಜಲ ಸಂಪನ್ಮೂಲ ಸಚಿವ, ಜಿಲ್ಲೆಯ ಕಾಂಗ್ರೆಸ್ ನಾಯಕ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಅಲ್ಲದೆ ಕೆರೆ ತುಂಬವ ಯೋಜನೆ ಜಾರಿಗೊಳಿಸಿರುವುದೇ ಬಿಜೆಪಿ ಸರ್ಕಾರ ಎಂದರು.
ಈ ಸಂದರ್ಭ ಶಿವರುದ್ರ ಬಾಗಲಕೋಟ, ವಿಜಯ ಜೋಶಿ ಮತ್ತಿತರರು ಇದ್ದರು.