ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ಕಚೇರಿ ಆಯೋಜಿಸಿದ್ದ ದೀಪಾವಳಿ ಆಚರಣೆಯ ಔತಣಕೂಟದಲ್ಲಿ ಮಾಂಸಹಾರ ಹಾಗೂ ಮದ್ಯ ನೀಡಿದ್ದಕ್ಕಾಗಿ ವಕ್ತಾರರು ಕ್ಷಮೆ ಯಾಚಿಸಿದೆ. ಭವಿಷ್ಯದಲ್ಲಿ ಇದು ಪುನರಾವರ್ತನೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿಯವರ ಅಧಿಕೃತ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಕೆಲವು ಬ್ರಿಟಿಷ್ ಹಿಂದುಗಳು ಮಾಂಸಾಹಾರ ಆಹಾರ ಮತ್ತು ಮದ್ಯ ನೀಡುವುದನ್ನು ವಿರೋಧಿಸಿದ್ದರು. ಅಲ್ಲದೇ ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಬ್ರಿಟಿಷ್ ಹಿಂದು, ಸಿಖ್ ಮತ್ತು ಜೈನ ಸಮುದಾಯಗಳು ನಮ್ಮ ದೇಶಕ್ಕೆ ನೀಡುತ್ತಿರುವ ಕೊಡುಗೆಗಾಗಿ ದೀಪಾವಳಿ ಔತಣಕೂಟ ಆಯೋಜಿಸಲಾಗಿತ್ತು. ಆದರೆ ಕಾರ್ಯಕ್ರಮದ ಆಯೋಜನೆಯಲ್ಲಿ ತಪ್ಪಾಗಿದೆ. ಅದಕ್ಕಾಗಿ ನಾವು ವಿಷಾಧಿಸುತ್ತೇವೆ. ಸಮುದಾಯದ ಭಾವನೆಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಈ ರೀತಿಯ ತಪ್ಪು ಮತ್ತೆ ಮರುಕಳಿಸುವುದಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
ಈ ಪಾರ್ಟಿಯಲ್ಲಿ ಸಮುದಾಯದ ಮುಖಂಡರು ಮತ್ತು ಉನ್ನತ ರಾಜಕಾರಣಿಗಳು ಭಾಗವಹಿಸಿದ್ದರು. ದೀಪಾಲಂಕಾರದ ದೀಪಗಳು, ಕೂಚಿಪುಡಿ ನೃತ್ಯ ಪ್ರದರ್ಶನ ಮತ್ತು ಸ್ಟಾರ್ಮರ್ ಅವರ ಭಾಷಣವನ್ನು ಸಮಾರಂಭ ಒಳಗೊಂಡಿತ್ತು.