ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದ್ದು, ನವೆಂಬರ್ 24 ಮತ್ತು ನವೆಂಬರ್ 25 ರಂದು ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ಈ ಮಿಲಿಯನ್ ಡಾಲರ್ ಟೂರ್ನಿಯ ಮೆಗಾ ಹರಾಜು ನಡೆಯಲಿದೆ.
ಈ ಬಾರಿ ಬರೋಬ್ಬರಿ 1574 ಆಟಗಾರರು ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದರು. ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹರಾಜಿಗೆ ನೋಂದಣಿಯಾಗಿರುವ ಆಟಗಾರರ ಶಾರ್ಟ್ ಲಿಸ್ಟ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅದರಂತೆ ಐಪಿಎಲ್ ಮೆಗಾ ಹರಾಜಿಗೆ ಒಟ್ಟು 574 ಆಟಗಾರರ ಅಂತಿಮ ಪಟ್ಟಿಯನ್ನು ಸಿದ್ದಗೊಳಿಸಲಾಗಿದೆ. ಇದರಲ್ಲಿ 48 ಕ್ಯಾಪ್ಡ್ ಭಾರತೀಯ ಆಟಗಾರರು ಸೇರಿದ್ದರೆ, 318 ಅನ್‌ಕ್ಯಾಪ್ಡ್ ಭಾರತೀಯ ಆಟಗಾರರು ಸೇರಿದ್ದಾರೆ.
ಉಳಿದಂತೆ 208 ವಿದೇಶಿ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು, ಇದರಲ್ಲಿ 12 ವಿದೇಶಿ ಅನ್‌ಕ್ಯಾಪ್ ಆಟಗಾರರು ಸೇರಿದ್ದಾರೆ. ವಾಸ್ತವವಾಗಿ ಐಪಿಎಲ್ ಮೆಗಾ ಹರಾಜಿಗೆ ಈ ಮೊದಲು 193 ವಿದೇಶಿ ಅನ್‌ಕ್ಯಾಪ್ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ ಕೇವಲ 12 ವಿದೇಶಿ ಅನ್‌ಕ್ಯಾಪ್ ಆಟಗಾರರಿಗೆ ಅವಕಾಶ ನೀಡಲಾಗಿದೆ. ಇದರಲ್ಲಿ ಮಿತ್ರ ರಾಷ್ಟ್ರಗಳ 3 ಆಟಗಾರರು ಸೇರಿದ್ದಾರೆ. ಈ ಮೂಲಕ ಐಪಿಎಲ್ ಮೆಗಾ ಹರಾಜಿನಲ್ಲಿ ಒಟ್ಟು 574 ಆಟಗಾರರ ಹೆಸರು ಬರಲಿದ್ದು, ಇದರಲ್ಲಿ ಖಾಲಿ ಇರುವ 204 ಸ್ಲಾಟ್ಗಳ ಭರ್ತಿ ಪ್ರಕ್ರಿಯೆ ನಡೆಯಲಿದೆ.
ಈ ಮೆಗಾ ಹರಾಜಿನ ಮಾರ್ಕ್ಯೂ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯ ಆಟಗಾರರಲ್ಲಿ ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಕೆಎಲ್ ರಾಹುಲ್, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರ ಹೆಸರುಗಳು ಸೇರಿವೆ. ಇವರುಗಳ ಮೂಲ ಬೆಲೆ 2 ಕೋಟಿ ರೂ. ಆಗಿದೆ. ಹಾಗೆಯೇ ಮಾರ್ಕ್ಯೂ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿದೇಶಿ ಆಟಗಾರರಲ್ಲಿ ಕಗಿಸೊ ರಬಾಡ, ಡೇವಿಡ್ ಮಿಲ್ಲರ್, ಮಿಚೆಲ್ ಸ್ಟಾರ್ಕ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜೋಸ್ ಬಟ್ಲರ್ ಹೆಸರು ಸೇರಿದ್ದು, ಮಿಲ್ಲರ್ ಮೂಲ ಬೆಲೆ 1.50 ಕೋಟಿ ರೂ. ಆಗಿದೆ.
ಈ ಬಾರಿ ಎರಡು ಸೆಟ್‌ಗಳಲ್ಲಿ ಮಾರ್ಕ್ಯೂ ಆಟಗಾರರ ಹೆಸರು ಹರಾಜಿಗೆ ಬರಲಿದ್ದು, ಮೊದಲ ಸೆಟ್‌ನಲ್ಲಿ ಜೋಸ್ ಬಟ್ಲರ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್ ಮತ್ತು ಮಿಚೆಲ್ ಸ್ಟಾರ್ಕ್ ಇದ್ದರೆ, ಎರಡನೇ ಸೆಟ್‌ನಲ್ಲಿ ಯುಜ್ವೇಂದ್ರ ಚಹಾಲ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಿಲ್ಲರ್, ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಇದ್ದಾರೆ. ಮೇಲೆ ಹೇಳಿದಂತೆ ಈ 12 ಆಟಗಾರರ ಪೈಕಿ ಮಿಲ್ಲರ್ ಅವರ ಮೀಸಲು ಬೆಲೆ 1.50 ಕೋಟಿ ರೂ.ಗಳಾಗಿದ್ದರೆ ಇತರ ಆಟಗಾರರ ಮೂಲ ಬೆಲೆ 2 ಕೋಟಿ ರೂ. ಆಗಿದೆ.