ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಹೊಸ ದಿಗಂತ’ ಪತ್ರಿಕೆಯ ಸಮೂಹ ಸಂಪಾದಕ ವಿನಾಯಕ ಭಟ್ ಮೂರೂರು, ಮಂಗಳೂರು ಆವೃತ್ತಿಯ ಮುಖ್ಯ ವರದಿಗಾರ ಕೆ.ಆನಂದ ಶೆಟ್ಟಿ ಮತ್ತು ವಿಶೇಷ ವರದಿಗಾರ ಗುರುವಪ್ಪ ಎನ್.ಟಿ.ಬಾಳೇಪುಣಿ ಅವರಿಗೆ ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪ್ರಕಟಿಸಲಾಗಿದೆ. ಶೀಘ್ರದಲ್ಲಿ ಬೆಂಗಳೂರಿನಲ್ಲಿ ಜರುಗುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡುವರು ಎಂದು ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ತಿಳಿಸಿದ್ದಾರೆ.
ವಿನಾಯಕ ಭಟ್
ವಿಜಯ ಕರ್ನಾಟಕ ಪತ್ರಿಕೆಯ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಪ್ರವೇಶ. ಮಂಗಳೂರು ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಕನ್ನಡ ಪ್ರಭ, ವಿಶ್ವವಾಣಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಎರಡೂವರೆ ದಶಕಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಹೊಸ ದಿಗಂತ ಪತ್ರಿಕೆಯ ಸಮೂಹ ಸಂಪಾದಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಗುಡಿಹಳ್ಳಿ ನಾಗರಾಜ ದತ್ತಿ ಪ್ರಶಸ್ತಿ ಪಡೆದಿದ್ದಾರೆ.
ಕೆ.ಆನಂದ ಶೆಟ್ಟಿ
ಮಂಗಳೂರು ಆವೃತ್ತಿಯಲ್ಲಿ ಮುಖ್ಯ ವರದಿಗಾರರಾಗಿ, ಆವೃತ್ತಿ ಮುಖ್ಯಸ್ಥರಾಗಿ ಸುದೀರ್ಘ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ. ಆರ್ಯಭಟ ಪ್ರಶಸ್ತಿ. ರೋಟರಿ ಕ್ಲಬ್‌ನ ವಂದನಾ ಪ್ರಶಸ್ತಿ ಪಡೆದಿದ್ದಾರೆ.
ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘವನ್ನು ಪುನರ್ ಸಂಘಟಿಸಿ ಬೆಳೆಸಿದವರು. ಸಂಘದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪದಾಧಿಕಾರಿಯಾಗಿ ದುಡಿದಿದ್ದಾರೆ. ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷರಾಗಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ.
ಆಕಾಶವಾಣಿ ವರದಿಗಾರರಾಗಿಯೂ ಸುಧೀರ್ಘ ಸೇವೆ ಸಲ್ಲಿಸಿದ್ದಾರೆ.
ಬಾಳೇಪುಣಿ
ಹೊಸ ದಿಗಂತ ಮಂಗಳೂರು ಆವೃತ್ತಿಯಲ್ಲಿ ಕಳೆದ ೨೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಿಕಾ ಕ್ಷೇತ್ರದಲ್ಲಿ ೩೮ ವರ್ಷಗಳ ಅನುಭವ ಹೊಂದಿದ್ದಾರೆ.
ಅನೇಕ ತೆರೆ ಮೆರೆಯ ಸಾಧಕರನ್ನು ಸಮಾಜಕ್ಕೆ ಪರಿಚಯಿಸಿದ್ದಾರೆ. ಪದ್ಯಾಣ ಗೋಪಾಲಕೃಷ್ಣ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ, ಸರೋಜಿನಿ ನಾಯ್ಡು ರಾಷ್ಟ್ರ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದಿಂದ ಕಾಂತಾವರ ಪುರಸ್ಕಾರ, ಕನಾರ್ಟಕ ಸರಕಾರದ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ವಿಶ್ವ ಸಂವಾದ ಕೇಂದ್ರದ ಬೆಸುನಾ ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನದ ಗೌರವಕ್ಕೆ ಪಾತ್ರರಾಗಿದ್ದಾರೆ.
ಗ್ರಾಮೀಣ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿದ್ದಾರೆ.