ಕಿಮ್ಸ್‌ ನಲ್ಲಿ ಸೀಟು ಕೊಡಿಸುತ್ತೇನೆಂದು ನಂಬಿಸಿ 10 ಲಕ್ಷರೂ. ವಂಚನೆ: ಹೈದರಾ ಬಾದ್‌ ನಲ್ಲಿ ಆರೋಪಿ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬೆಂಗಳೂರಿನ ಪ್ರತಿಷ್ಟಿತ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ್) ವೈದ್ಯಕೀಯ ಸೀಟು ಕೊಡಿಸುತ್ತೇನೆಂದು ನಂಬಿಸಿ ಅಭ್ಯರ್ಥಿಯಿಂದ ಹಣ ಪಡೆದು ವಂಚಿಸುತ್ತಿದ್ದ ಬಿಹಾರ ಮೂಲದ ವಂಚಕನೊಬ್ಬನನ್ನು ಹೈದರಾಬಾದ್‌ನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (NEET) ಹಾಜರಾದ ಅಭ್ಯರ್ಥಿಯೊಬ್ಬಳು ಕೌನ್ಸೆಲಿಂಗ್‌ ಗಾಗಿ ಕಾಯುತ್ತಿದ್ದಳು. ಈ ಸಂದರ್ಭದಲ್ಲಿ ಆಕೆಯನ್ನು ಮೊಬೈಲ್‌ ಮೂಲಕ ಸಂಪರ್ಕಿಸಿ ಬೆಂಗಳೂರಿನ ಕಿಮ್ಸ್‌ನಲ್ಲಿ ವೈದ್ಯಕೀಯ ಸೀಟು ನೀಡುವುದಾಗಿ ಆಕೆಯನ್ನು ನಂಬಿಸಲಾಗಿದೆ. ನಂಬಿದ ಆಕೆ ಸುಮಾರು 10 ಲಕ್ಷ ಹಣವನ್ನು ನೀಡಿದ್ದಾಳೆ. ಹಣ ಪಡೆದ ನಂತರ ಆತನ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ವಂಚನೆಯಾಗಿರುವುದು ತಿಳಿದು ಸಂತ್ರಸ್ತೆಯು ತಕ್ಷಣವೇ ಪೋಲೀಸರಿಗೆ ದೂರು ನೀಡಿದ್ದಾಳೆ. ತಕ್ಷಣವೇ ಹೈದ್ರಾಬಾದ್‌ ಸೈಬರ್‌ ಕ್ರೈಂ ವಿಭಾಗದ ಪೋಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ಪೋಲೀಸರು ಹೇಳುವ ಪ್ರಕಾರ ಈ ಗುಂಪು ಬೆಂಗಳೂರಿನಲ್ಲಿ ಕಚೇರಿ ಸ್ಥಾಪಿಸಿ ನೀಟ್ ಕೌನ್ಸೆಲಿಂಗ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿದ್ದರು. ವಿದ್ಯಾರ್ಥಿಗಳನ್ನು ಸಂಪರ್ಕಿಸಿ ತಮ್ಮ ಪ್ರಭಾವದಿಂದ ವೈದ್ಯಕೀಯ ಸೀಟು ಕೊಡಿಸುವುದಾಗಿ ಹೇಳಿ ವಿದ್ಯಾರ್ಥಿಗಳನ್ನು ನಂಬಿಸಿ ಶುಲ್ಕ ಪಾವತಿಸುವಂತೆ ಹೇಳುತ್ತಿದ್ದರು.ವಿದ್ಯಾರ್ಥಿಗಳು ಅನುಮಾನ ವ್ಯಕ್ತಪಡಿಸಿದರೆ ಅವರನ್ನು ಕೋರಮಂಗಲದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿದ್ದ ಕಚೇರಿಗೆ ಕರೆದೊಯ್ದು ನಂಬುವಂತೆ ಮಾಡುತ್ತಿದ್ದರು. ಬ್ಯಾಂಕ್ ಖಾತೆಗೆ ಶುಲ್ಕ ವರ್ಗಾವಣೆಯಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗುತ್ತಿದ್ದರು.

ಪ್ರಸ್ತುತ ಹೈದರಾಬಾದ್‌ ನಲ್ಲಿ ಬಂಧಿತನಾಗಿರುವ ಆರೋಪಿಯನ್ನು 30 ವರ್ಷದ ಅಶೋಕ್ ಷಾ ಎಂದು ಗುರುತಿಸಲಾಗಿದ್ದು ಆತನನ್ನು ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಈ ರೀತಿ ಆಮೀಷವೊಡ್ಡುವ ಅಪರಿಚಿತರನ್ನು ನಂಬಿ ಹಣ ವರ್ಗಾವಣೆ ಮಾಡದಂತೆ ಪೋಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!