ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ ನಿರ್ಮಾಣ ಹಂತದಲ್ಲಿರುವಾಗಲೇ ದೇಶದ ಹೈ-ಸ್ಪೀಡ್ ರೈಲು ಜಾಲವನ್ನು ಮತ್ತಷ್ಟು ವಿಸ್ತರಿಸಲು ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿದೆ. ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಉದ್ದೇಶದಿಂದ ಇನ್ನೂ ಏಳು ಹೊಸ ಬುಲೆಟ್ ರೈಲು ಮಾರ್ಗಗಳನ್ನು ಗುರುತಿಸಲಾಗಿದೆ.
ಯಾವ ನಗರಗಳಿಗೆ ಸಂಪರ್ಕ?
ಪ್ರಸ್ತಾವಿತ ಹೊಸ ಮಾರ್ಗಗಳಲ್ಲಿ ಮುಂಬೈ-ಪುಣೆ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಹೈದರಾಬಾದ್-ಚೆನ್ನೈ, ಚೆನ್ನೈ-ಬೆಂಗಳೂರು, ದೆಹಲಿ-ವಾರಾಣಸಿ ಹಾಗೂ ವಾರಾಣಸಿ-ಸಿಲಿಗುರಿ ಮಾರ್ಗಗಳು ಸೇರಿವೆ. ಈ ಮಾರ್ಗಗಳು ದೇಶದ ಪ್ರಮುಖ ಕೈಗಾರಿಕಾ, ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಕೇಂದ್ರಗಳನ್ನು ಸಂಪರ್ಕಿಸಲಿವೆ.
ಇದನ್ನೂ ಓದಿ:
ಇನ್ನೂ ಆರಂಭವಾಗಿಲ್ಲ ಕಾಮಗಾರಿ
ಈ ಯೋಜನೆಗಳಿಗೆ ಸಂಬಂಧಿಸಿದಂತೆ ಸದ್ಯ ಯಾವುದೇ ನಿರ್ಮಾಣ ವೇಳಾಪಟ್ಟಿ ಪ್ರಕಟವಾಗಿಲ್ಲ. ಪ್ರತಿ ಮಾರ್ಗಕ್ಕೂ ಕಾರ್ಯಸಾಧ್ಯತಾ ಅಧ್ಯಯನ, ಅನುಮೋದನೆ, ಹಣಕಾಸು ವ್ಯವಸ್ಥೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕವೇ ಕಾಮಗಾರಿ ಆರಂಭವಾಗಲಿದೆ.
ಪ್ರಯಾಣದ ಅವಧಿ ಗಣನೀಯ ಇಳಿಕೆ
ಪ್ರಸ್ತಾವಿತ ಯೋಜನೆಗಳ ಪ್ರಕಾರ ಮುಂಬೈ-ಪುಣೆ ನಡುವಿನ ಪ್ರಯಾಣ ಕೇವಲ 48 ನಿಮಿಷಗಳಲ್ಲಿ, ಬೆಂಗಳೂರು-ಚೆನ್ನೈ 73 ನಿಮಿಷಗಳಲ್ಲಿ ಹಾಗೂ ಬೆಂಗಳೂರು-ಹೈದರಾಬಾದ್ ಮಾರ್ಗವನ್ನು ಸುಮಾರು 2 ಗಂಟೆ 10 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ.
ಇದೇ ರೀತಿ ಪುಣೆ-ಹೈದರಾಬಾದ್ ಪ್ರಯಾಣಕ್ಕೆ 2 ಗಂಟೆ 8 ನಿಮಿಷ, ದೆಹಲಿ-ಲಖನೌಗೆ 2 ಗಂಟೆ, ದೆಹಲಿ-ವಾರಾಣಸಿಗೆ 3 ಗಂಟೆ 15 ನಿಮಿಷ ಮತ್ತು ದೆಹಲಿ-ಸಿಲಿಗುರಿಗೆ ಸುಮಾರು 6 ಗಂಟೆಗಳ ಅವಧಿ ನಿಗದಿಪಡಿಸಲಾಗಿದೆ.
ಪ್ರಸ್ತುತ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಪೂರ್ಣ ಪ್ರಯಾಣದ ಅವಧಿ 1 ಗಂಟೆ 57 ನಿಮಿಷಗಳಾಗಿರಲಿದೆ.



