Thursday, February 29, 2024

ಮೇರು ಸಾಹಿತಿ, ಹಿರಿಯ ವಿದ್ವಾಂಸ, ಸಂಶೋಧಕ ಅಮೃತ ಸೋಮೇಶ್ವರ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇರು ಸಾಹಿತಿ, ಹಿರಿಯ ವಿದ್ವಾಂಸ, ಯಕ್ಷಗಾನ, ಜಾನಪದ, ಭೂತಾರಾಧನೆ ಕ್ಷೇತ್ರದ ಸಂಶೋಧಕ ಅಮೃತ ಸೋಮೇಶ್ವರ (88) ಶನಿವಾರ ವಿಧಿವಶರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರದ ಅಮೃತ ಸೋಮೇಶ್ವರ, ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಕನ್ನಡ ಪ್ರಾಧ್ಯಾಪಕರಾಗಿ ಸುಮಾರು 35 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರಕ್ಕೆ ಸೇವೆ ನೀಡಿದ್ದಾರೆ. ಇದಲ್ಲದೆ ಕನ್ನಡ, ತುಳು ಭಾಷೆಗಳಲ್ಲಿ ವಿವಿಧ ಸಾಹಿತ್ಯ ಕೃಷಿ ನಡೆಸಿದ್ದಾರೆ. ನೂರಕ್ಕೂ ಅಧಿಕ ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಸಮರ್ಪಿಸಿದ ಹೆಗ್ಗಳಿಕೆ ಅವರದ್ದು.

ಸೋಮೇಶ್ವರರ ‘ತುಳುನಾಡ ಕಲ್ಕುಡೆ’ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಯಕ್ಷಗಾನ ಕೃತಿ ಸಂಪುಟ’ಕ್ಕೆ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ‘ತುಳುಪಾಡ್ದನ ಕಥೆಗಳು’ ಕೃತಿಗೆ ಕೇಂದ್ರವಿದ್ಯಾ ಇಲಾಖೆಯ ಪ್ರಶಸ್ತಿ, ‘ತುಳುಪಾಡ್ದನ ಸಂಪುಟ’ಕ್ಕೆ ಕು.ಶಿ. ಹರಿವಾಸಭಟ್ಟ ಜಾನಪದ ಪ್ರಶಸ್ತಿ, ‘ಅಪಾರ್ಥಿನಿ’ ಕುಚೋದ್ಯ ಶಬ್ದ ಕೋಶಕ್ಕೆ ಆರ್ಯಭಟ ಪ್ರಶಸ್ತಿ, ಯಕ್ಷಗಾನದ ಕೊಡುಗೆಗಾಗಿ ‘ಪಾರ್ತಿಸುಬ್ಬ ಪ್ರಶಸ್ತಿ’ ಆಕಾಶವಾಣಿ ಬಹುಮಾನ, ತುಳು ಅಕಾಡಮಿ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ ಸಂದಿದೆ.

ಇದಲ್ಲದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದ.ಕ. ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳು ಕೂಡಾ ಅವರ ಮುಡಿಯನ್ನು ಅಲಂಕರಿಸಿವೆ.

ಮುಲ್ಕಿಯಲ್ಲಿ ನಡೆದ ಅಖಿಲ ಭಾರತ ತುಳು ಸಮ್ಮೇಳನ, ಮುಂಬಯಿಯಲ್ಲಿ ನಡೆದ ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆ ಗೌರವಕ್ಕೂ ಅವರು ಭಾಜನರಾಗಿದ್ದಾರೆ. 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಗೌರವಕ್ಕೆ ಕೂಡಾ ಸೋಮೇಶ್ವರ್ ಪಾತ್ರರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!