ಲಕ್ಷದ್ವೀಪದ ಭೇಟಿಯಲ್ಲಿ ಮಾಲ್ಡೀವ್ಸ್ ದೇಶಕ್ಕೆ ಸಂದೇಶ ರವಾನಿಸಿದರಾ ಮೋದಿ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿಕೊಟ್ಟು ಕಡಲತೀರದಲ್ಲಿ ಸುತ್ತಾಟ ಮತ್ತು ಸಮುದ್ರದಲ್ಲಿ ಮುಳುಗುಹಾಕಿದ ಚಿತ್ರಗಳನ್ನು ಹಂಚಿಕೊಂಡಿದ್ದರು. ಅವು ಬಹಳ ವೈರಲ್ ಆಗಿದ್ದವು. ಪ್ರಧಾನಿ ಮೋದಿಯವರು ಲಕ್ಷದ್ವೀಪವನ್ನು ಖುದ್ದು ತಾವೇ ಬ್ರಾಂಡ್ ರಾಯಭಾರದ ರೂಪದರ್ಶಿ ಎಂಬಂತೆ ಪ್ರಸ್ತುತಪಡಿಸಿರುವುದರ ಹಿಂದೆ ಜಾಗತಿಕ ರಾಜಕಾರಣದ ಉದ್ದೇಶಗಳಿವೆ ಎಂಬ ಚರ್ಚೆ ಈಗ ಶುರುವಾಗಿದೆ.

ಇತ್ತೀಚೆಗೆ ಭಾರತದ ಹಿತಾಸಕ್ತಿಗಳ ವಿರುದ್ಧ ಹಾಗೂ ಚೀನಾ ಪರ ವ್ಯವಹರಿಸುತ್ತಿರುವ ದ್ವೀಪರಾಷ್ಟ್ರ ಮಾಲ್ಡೀವ್ಸ್’ಗೆ ಬಿಸಿಮುಟ್ಟಿಸುವ ಉದ್ದೇಶ ಪ್ರಧಾನಿ ಮೋದಿಯವರ ಈ ಚಟುವಟಿಕೆಗಳ ಹಿಂದಿದೆ ಎಂದು ಸುದ್ದಿವಾಹಿನಿಗಳ ಅಭಿಪ್ರಾಯನಿರೂಪಕರು ಹಾಗೂ ಸಾಮಾಜಿಕ ಮಾಧ್ಯಮದ ವಿಶ್ಲೇಷಕರು ಹೇಳುತ್ತಿದ್ದಾರೆ.

ನವೆಂಬರ್ 2023ರಲ್ಲಿ ಮಾಲ್ಡೀವ್ಸ್ ನಲ್ಲಿ ಮೊಹಮದ್ ಮುಯಿಜು ಸರ್ಕಾರ ಬರುವುದಕ್ಕೆ ಮುಂಚೆ ಭಾರತದ ಜತೆ ಅದರ ಸಂಬಂಧ ಉತ್ತಮವಾಗಿತ್ತು. ಆದರೆ ಈಗಿನ ಸರ್ಕಾರ ಚೀನಾವನ್ನು ಸ್ನೇಹಿತನನ್ನಾಗಿ ನೋಡುತ್ತಿದೆ. ಭಾರತದ ನೌಕಾಸೇನೆಯ ಉಪಸ್ಥಿತಿ ಮಾಲ್ಡೀವ್ಸ್ ನಲ್ಲಿ ಇಲ್ಲವಾಗಬೇಕು ಎಂಬ ನಿಲವು ತಾಳಿದೆ. ಸಾಗರ ಸುರಕ್ಷತೆ ದೃಷ್ಟಿಯಿಂದ ಮಾಲ್ಡೀವ್ಸ್ ಭಾರತಕ್ಕೆ ಮಹತ್ವದ್ದು. ಈಗ ಮಾಲ್ಡೀವ್ಸ್ ಜತೆ ಚೌಕಾಶಿಗಿರುವ ಮಾರ್ಗ ಎಂದರೆ ಭಾರತೀಯರೇ ಆಧಾರವಾಗಿರುವ ಅದರ ಪ್ರವಾಸೋದ್ಯಮಕ್ಕೆ ಬಿಸಿ ಮುಟ್ಟಿಸುವುದು. ಸಾಗರತೀರ ಪ್ರವಾಸಕ್ಕೆ ಮತ್ತೆಲ್ಲೂ ಹೋಗಬೇಡಿ, ಲಕ್ಷದ್ವೀಪಕ್ಕೆ ಬನ್ನಿ ಎನ್ನುವ ಮೂಲಕ ಪ್ರಧಾನಿ ಮೋದಿ ಇದೇ ಉದ್ದೇಶ ಸಾಧಿಸುವತ್ತ ಹೆಜ್ಜೆ ಹಾಕಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಾಲ್ಡೀವ್ಸ್ ಅನ್ನೋ ದ್ವೀಪಗಳ ಸಮೂಹದ ದೇಶ ನೆಚ್ಚಿಕೊಂಡಿರೋದು ಪ್ರವಾಸೋದ್ಯಮವನ್ನು. ಇದಕ್ಕೆ ಭಾರತೀಯ ಪ್ರವಾಸಿಗರ ಕೊಡುಗೆ ಬಹಳ ದೊಡ್ಡದಿದೆ. ಅದರಲ್ಲೂ ಕೋವಿಡ್ ನಂತರ, ಮನೋಲ್ಲಾಸಕ್ಕೆ-ವಿಹಾರಕ್ಕೆ ಎಂದು ಮಾಲ್ಡೀವ್ಸ್ ಕಡಲತೀರಗಳಲ್ಲಿ ಮೈಚೆಲ್ಲುವ ಭಾರತೀಯರ ಸಂಖ್ಯೆ ದೊಡ್ಡದಿದೆ. 2021ರಲ್ಲಿ 2 ಲಕ್ಷದ 91 ಸಾವಿರ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಗೆ ಭೇಟಿ ಕೊಟ್ಟಿದ್ರೆ, 2022ರಲ್ಲಿ ಸಹ ಸುಮಾರು ಎರಡೂವರೆ ಲಕ್ಷ ಭಾರತೀಯರು ಮಾಲ್ಡೀವ್ಸ್ ಪ್ರವಾಸ ಮಾಡಿದ್ದಾರೆ. ಐದುಕಾಲು ಲಕ್ಷ ಜನಸಂಖ್ಯೆಯ ಮಾಲ್ಡೀವ್ಸ್ ಪಾಲಿಗೆ ಈ ಪ್ರವಾಸಿಗರ ಸಂಖ್ಯೆ ನಿಜಕ್ಕೂ ದೊಡ್ಡದು.

ಈ ಮಾಲ್ಡೀವ್ಸ್ ಗೆ ಸುಮಾರು 800 ಕಿಲೊಮೀಟರ್ ದೂರದಲ್ಲಿರೋ ಲಕ್ಷದ್ವೀಪದ ಸಮುದ್ರ ತೀರಗಳು ಮಾಲ್ಡೀವ್ಸ್ ಗಿಂತ ಭಿನ್ನ ಏನಲ್ಲ. ಮಾಲ್ಡೀವ್ಸ್ ರೀತಿಯಲ್ಲೇ ಲಕ್ಷದ್ವೀಪವೂ ಹಲವು ದ್ವೀಪಗಳ ಗುಚ್ಛ. ಆದರೆ, 2022ರಲ್ಲಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ ವಿದೇಶಿಗರು 1 ಲಕ್ಷವಾದರೆ, 2021ರಲ್ಲಿ ಈ ಸಂಖ್ಯೆ ಕೇವಲ 4,000. ಭಾರತೀಯರು ಇಲ್ಲಿಗೆ ಭೇಟಿ ಕೊಡೋದಕ್ಕೂ ಪರ್ಮಿಟ್ ವ್ಯವಸ್ಥೆ ಇದೆ. ಹೀಗಾಗಿ ಲಕ್ಷದ್ವೀಪ ಭಾರತೀಯರ ಪಾಲಿಗೂ ಅಷ್ಟೊಂದು ದೊಡ್ಡ ಆಕರ್ಷಣೆಯಾಗಿ ಉಳಿದಿಲ್ಲ.

ಇದೀಗ ಪ್ರಧಾನಿ ಮೋದಿಯವರ ಲಕ್ಷದ್ವೀಪದ ಫೋಟೊ ಮತ್ತು ವಿಡಿಯೊ ಶೂಟ್ ಗಳು ಲಕ್ಷದ್ವೀಪದ ಬಗ್ಗೆ ಜನರಲ್ಲಿ ಆಸಕ್ತಿ ಹುಟ್ಟುಹಾಕಿವೆ. ಅವರ ಈ ಭೇಟಿಯ ನಂತರ ಲಕ್ಷದ್ವೀಪ ಗೂಗಲ್ಲಿನ ಟಾಪ್ 10 ಹುಡುಕಾಟಗಳಲ್ಲಿ ಒಂದಾಗಿತ್ತು.

 ಸಾಮಾಜಿಕ ತಾಣ ಎಕ್ಸ್ ನಲ್ಲಿ ಮಾಲ್ಡೀವ್ಸ್ ಸಂಸತ್ ಪ್ರತಿನಿಧಿಯೊಬ್ಬ ಈ ವಿದ್ಯಮಾನಕ್ಕೆ ಕಟಕಿಯಾಡಿದ್ದು, “ಏನೇ ಮಾಡಿದರೂ ದುರ್ನಾತ ಬೀರುವ ಭಾರತಕ್ಕೆ ಪ್ರವಾಸಿಗರೇಕೆ ಬರುತ್ತಾರೆ” ಎಂದಿದ್ದಾರೆ. ಅವರ ಈ ವ್ಯಂಗ್ಯವೇ ಮಾಲ್ಡೀವ್ಸ್ ಗೆ ಮೋದಿಯವರ ನಡೆ ಬಾಧಿಸಿದೆ ಎಂದು ಸಾಕ್ಷ್ಯ ಹೇಳುತ್ತಿದೆ ಅಂತಲೂ ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಇದೇ ವ್ಯಕ್ತಿ ಕೆಲವು ವರ್ಷಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ತನಗೆ ಭಾರತದ ನಾಗರಿಕತೆ ಬೇಕು ಎಂದು ಗೋಗರೆಯುತ್ತಿದ್ದ. ಆಗ ಕೊಳಕಾಗಿ ಕಂಡಿರದ ಭಾರತ ಈಗ ಹಾಗೆನಿಸುತ್ತಿದೆಯೇ ಎಂದು ಎಕ್ಸ್ ತಾಣದಲ್ಲಿ ಸಕ್ರಿಯರಾಗಿರುವ ಭಾರತೀಯರು ಮರುಪ್ರಶ್ನಿಸಿದ್ದಾರೆ.

ಇವೆಲ್ಲದರ ನಡುವೆಯೇ, ಭಾರತವು ಲಕ್ಷದ್ವೀಪ ಪ್ರವಾಸಕ್ಕಿರುವ ಪರ್ಮಿಟ್ ವ್ಯವಸ್ಥೆ ಮೊದಲಾದವನ್ನು ಸುಗಮಗೊಳಿಸದಿದ್ದರೆ ಆ ಪ್ರದೇಶವು ಅದೆಷ್ಟೇ ಸುಂದರವಾಗಿದ್ದರೂ ಪ್ರವಾಸಿಗರನ್ನು ಸೆಳೆಯದು ಎಂಬ ಅಭಿಪ್ರಾಯಗಳೂ ಬಂದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!